ಹಳೇ ಲವ್ವರ್ ಜೊತೆ ಕಾರಲ್ಲಿ ಸುತ್ತಾಡಿದ ಯುವತಿ; ರೊಚ್ಚಿಗೆದ್ದು ಪಟಾಲಂನೊಂದಿಗೆ ಬಂದು ಮುಗಿಸಲು ನೋಡಿದ ಹಾಲಿ ಪ್ರೇಮಿ!

ಬೆಂಗಳೂರು: ಸಿಲಿಕಾನ್ ಸಿಟಿಯ ಶಾಂತಿನಗರದಲ್ಲಿ ಇತ್ತೀಚೆಗೆ ಕಾರು ಚಾಲಕನ ಮೇಲೆ ನಡೆದಿದ್ದ ಭೀಕರ ಗ್ಯಾಂಗ್ ಹಲ್ಲೆ ಪ್ರಕರಣಕ್ಕೆ ಈಗ ಚಿತ್ರಕಥೆಯನ್ನೇ ಮೀರಿಸುವಂತಹ ರೋಚಕ ಪ್ರೇಮ ಕಥೆಯ ಟ್ವಿಸ್ಟ್ ಸಿಕ್ಕಿದೆ. ಯುವತಿಯೊಬ್ಬಳು ತನ್ನ ಮಾಜಿ ಪ್ರೇಮಿಯೊಂದಿಗೆ ಕಾರಿನಲ್ಲಿ ಸುತ್ತಾಡುತ್ತಿದ್ದನ್ನು ಸಹಿಸದ ಆಕೆಯ ಹಾಲಿ ಪ್ರೇಮಿ, ತನ್ನ ಗ್ಯಾಂಗ್‌ನೊಂದಿಗೆ ಬಂದು ಮಾರಣಾಂತಿಕ ಹಲ್ಲೆ ನಡೆಸಿರುವುದು ವಿಲ್ಸನ್ ಗಾರ್ಡನ್ ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.

ಕಳೆದ ಮೇ 22ರಂದು ಮುಂಜಾನೆ ಶಾಂತಿನಗರದ ಮುಖ್ಯರಸ್ತೆಯೊಂದರಲ್ಲಿ ಈ ಗ್ಯಾಂಗ್‌ನಿಂದ ಭೀಕರ ಗೂಂಡಾಗಿರಿ ನಡೆದಿತ್ತು. ಸಾರ್ವಜನಿಕ ರಸ್ತೆಯಲ್ಲೇ ಸುಮಾರು 6 ರಿಂದ 7 ಜನರ ಗ್ಯಾಂಗ್‌, ಕಾರಿನಲ್ಲಿದ್ದ ಅರ್ಫಾನ್ ಎಂಬ ಯುವಕನನ್ನು ಅಡ್ಡಗಟ್ಟಿ ಮನಬಂದಂತೆ ಥಳಿಸಿತ್ತು. ಈ ಹಲ್ಲೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ತಕ್ಷಣ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು ತನಿಖೆ ಆರಂಭಿಸಿ, ಸದ್ಯ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 ಪೊಲೀಸರು ಹಲ್ಲೆಗೊಳಗಾದ ಚಾಲಕ ಅರ್ಫಾನ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಅಸಲಿ ಪ್ರೇಮ ಪುರಾಣ ಬಯಲಾಗಿದೆ. ಹಲ್ಲೆಗೊಳಗಾದ ಅರ್ಫಾನ್ ಈ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ, ಆದರೆ ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರ ನಡುವೆ ಬ್ರೇಕ್ ಅಪ್ ಆಗಿತ್ತು. ತದನಂತರ ಆ ಯುವತಿ ಮಂಜು ಎಂಬಾತನೊಂದಿಗೆ ಹೊಸದಾಗಿ ಪ್ರೇಮಪಾಶದಲ್ಲಿ ಬಿದ್ದಿದ್ದಳು.

ಇದನ್ನೂ ಓದಿ: ಬಂಗ್ಲಗುಡ್ಡೆಯ ನಿಗೂಢ ಕೊಲೆ ರಹಸ್ಯ ಬಯಲಾಗುತ್ತಾ?: ಸೀಲ್ ಆಗಿದ್ದ ತಲೆಬುರುಡೆ, ಗೋಣಿಚೀಲ ಓಪನ್ ಮಾಡಿ ವಿಡಿಯೋ ಮಹಜರು ನಡೆಸಿದ FSL ಅಧಿಕಾರಿಗಳು!

ಆದರೆ, ಇತ್ತೀಚೆಗೆ ಹಾಲಿ ಪ್ರೇಮಿ ಮಂಜುಗೆ ಗೊತ್ತಿಲ್ಲದಂತೆ ಯುವತಿಯು ತನ್ನ ಹಳೇ ಲವ್ವರ್ ಅರ್ಫಾನ್‌ನನ್ನು ಮತ್ತೆ ರಹಸ್ಯವಾಗಿ ಭೇಟಿಯಾಗಲು ಶುರು ಮಾಡಿದ್ದಳು. ಮೇ 22ರ ಮುಂಜಾನೆ ಯುವತಿ ಹಾಗೂ ಅರ್ಫಾನ್ ಇಬ್ಬರೂ ಶಾಂತಿನಗರದ ಬಳಿ ಕಾರಿನಲ್ಲಿ ಒಟ್ಟಿಗೆ ಸುತ್ತಾಡುತ್ತಿರುವುದನ್ನು ಪತ್ತೆ ಹಚ್ಚಿದ ಹಾಲಿ ಪ್ರೇಮಿ ಮಂಜು, ತನ್ನ ಪಟಾಲಂನೊಂದಿಗೆ ಅರ್ಫಾನ್‌ನನ್ನು ಮುಗಿಸಲು ಪ್ಲಾನ್ ಮಾಡಿ ಈ ಭೀಕರ ಕೃತ್ಯ ಎಸಗಿದ್ದಾನೆ. ಸದ್ಯ ತಲೆಮರೆಸಿಕೊಂಡಿರುವ ಮುಖ್ಯ ಆರೋಪಿ ಮಂಜು ಹಾಗೂ ಆತನ ಗ್ಯಾಂಗ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕ್ರೈಮ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು