ಕಾಂಗ್ರೆಸ್‌ನಲ್ಲಿ ಆಡಿಯೋ ಬಾಂಬ್ ತಲ್ಲಣ!: ಸ್ವಪಕ್ಷದವರಿಗೇ ಕೈಕೊಡಲು ಜಮೀರ್ ಸ್ಕೆಚ್?; ‘ಇದು ಎಐ ಸೃಷ್ಟಿಸಿದ ನಕಲಿ ಧ್ವನಿ’ ಎಂದ ಸಚಿವ!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಆಡಿಯೋ ಕ್ಲಿಪ್ ಭಾರಿ ಸಂಚಲನ ಮೂಡಿಸಿದೆ. ಸಚಿವ ಜಮೀರ್ ಅಹಮದ್ ಖಾನ್ ಅವರು ತಮ್ಮದೇ ಪಕ್ಷದ ಅಭ್ಯರ್ಥಿಗಳಿಗೆ ಹಿನ್ನಡೆ ಉಂಟುಮಾಡಲು ಆಪ್ತರೊಂದಿಗೆ ಷಡ್ಯಂತ್ರ ನಡೆಸಿದ್ದಾರೆ ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಕಾಂಗ್ರೆಸ್ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.

ವೈರಲ್ ಆಡಿಯೋದಲ್ಲೇನಿದೆ?:

ಸಾಮಾಜಿಕ ಜಾಲತಾಣವಾದ ‘ಎಕ್ಸ್’ (ಟ್ವಿಟ್ಟರ್) ನಲ್ಲಿ ಸುಮಾರು 3 ನಿಮಿಷ 51 ಸೆಕೆಂಡ್ ಅವಧಿಯ ಆಡಿಯೋ ಕ್ಲಿಪ್ ಒಂದು ಹರಿದಾಡುತ್ತಿದೆ. ಇದರಲ್ಲಿ ಜಮೀರ್ ಅಹಮದ್ ಅವರು ತಮ್ಮ ಆಪ್ತ ಮೊಹಮ್ಮದ್ ಸಿರಾಜ್ ಎಂಬುವವರ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಸಂಭಾಷಣೆಯಲ್ಲಿ, “ಬಹಳಷ್ಟು ವಾರ್ಡ್‌ಗಳಲ್ಲಿ ಎಸ್‌ಡಿಪಿಐ (SDPI – ಕುಕ್ಕರ್ ಗುರುತು) ಹವಾ ಇದೆ. ಒತ್ತಾಯಪೂರ್ವಕವಾಗಿ ಯಾರಿಗೂ ಕಾಂಗ್ರೆಸ್‌ಗೆ ವೋಟ್ ಹಾಕಲು ಕರೆಯಬೇಡಿ. ಸಾದಿಕ್ ಪೈಲ್ವಾನ್ ವಾರ್ಡ್‌ನಲ್ಲಿ ಕಾಂಗ್ರೆಸ್‌ಗೆ ಮೈನಸ್ ಆಗಬೇಕು. ಮನೆಯಿಂದ ಹೊರಬಂದವರಿಗೆ ಎಸ್‌ಡಿಪಿಐ ಅಥವಾ ಪಕ್ಷೇತರರಿಗೆ ಮತ ಹಾಕುವಂತೆ ಹೇಳಿ” ಎಂಬ ಆಘಾತಕಾರಿ ಅಂಶಗಳಿವೆ. ಇದು ಸ್ವಪಕ್ಷದ ಅಭ್ಯರ್ಥಿಗಳ ಸೋಲಿಗೆ ಸಚಿವರೇ ನಡೆಸಿರುವ ಆಂತರಿಕ ತಂತ್ರ ಎಂಬ ಆರೋಪಕ್ಕೆ ಕಾರಣವಾಗಿದೆ.

ಇದನ್ನೂ ಓದಿ:‘ನನ್ನ ರಾಜಕೀಯ ಜೀವನ ತೆರೆದ ಪುಸ್ತಕ, ಸಂವಿಧಾನವೇ ನನ್ನ ಧರ್ಮ!’: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಸುದ್ದಿಗೋಷ್ಠಿ

ಇದು ಎಐ ಸೃಷ್ಟಿಸಿದ ನಕಲಿ ಆಡಿಯೋ: ಜಮೀರ್ ಸವಾಲು!:

ಈ ವಿವಾದಾತ್ಮಕ ಆಡಿಯೋ ರಾಜಕೀಯ ವಲಯದಲ್ಲಿ ಕಿಡಿ ಹೊತ್ತಿಸುತ್ತಿದ್ದಂತೆ ಸಚಿವ ಜಮೀರ್ ಅಹಮದ್ ಖಾನ್ ಅವರು ತಕ್ಷಣವೇ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದ್ದಾರೆ. “ವೈರಲ್ ಆಗಿರುವ ಆಡಿಯೋ ಸಂಪೂರ್ಣವಾಗಿ ನಕಲಿ ಮತ್ತು ಸತ್ಯಕ್ಕೆ ದೂರವಾಗಿದೆ. ಇತ್ತೀಚಿನ ಎಐ (ಕೃತಕ ಬುದ್ಧಿಮತ್ತೆ ) ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಂಡು, ಕಿಡಿಗೇಡಿಗಳು ನನ್ನ ಧ್ವನಿಯನ್ನು ಅನುಕರಿಸಿ ಈ ರೀತಿ ಸೃಷ್ಟಿಸಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಗೊಂದಲ ಸೃಷ್ಟಿಸಲು ನಡೆಸಿರುವ ರಾಜಕೀಯ ಷಡ್ಯಂತ್ರ ಇದಾಗಿದೆ. ಇದರ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದು, ಸರ್ಕಾರ ನಡೆಸುವ ಯಾವುದೇ ರೀತಿಯ ತನಿಖೆಗಾದರೂ ನಾನು ಸಿದ್ಧನಿದ್ದೇನೆ” ಎಂದು ಜಮೀರ್ ಸವಾಲು ಹಾಕಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು