ಚಿಕ್ಕಮಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಕರಾವಳಿಯ ಮಂಗಳೂರಿಗೆ ಪ್ರಯಾಣಿಸುವ ಸಾರ್ವಜನಿಕರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಜೂನ್ 3 ರಿಂದಲೇ ಬೆಂಗಳೂರು ಮತ್ತು ಮಂಗಳೂರು ನಡುವೆ ಬಹುನಿರೀಕ್ಷಿತ ‘ವಂದೇ ಭಾರತ್’ (Vande Bharat) ಎಕ್ಸ್ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ (Trial Run) ಆರಂಭವಾಗಲಿದೆ ಎಂದು ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಕೇಂದ್ರ ಸಚಿವ ವಿ. ಸೋಮಣ್ಣ ಪ್ರಕಟಿಸಿದ್ದಾರೆ.
ಚಿಕ್ಕಮಗಳೂರಿನ ಅಜ್ಜಂಪುರದಲ್ಲಿ ಭಾನುವಾರ ನಡೆದ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಈ ಮಹತ್ವದ ವಿಷಯವನ್ನು ಹಂಚಿಕೊಂಡಿದ್ದಾರೆ.
ರಾಜ್ಯದಲ್ಲಿ ರೈಲ್ವೆ ಹಳಿಗಳ ವಿದ್ಯುದೀಕರಣ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದ ಸಚಿವರು, “ಕರ್ನಾಟಕದಲ್ಲಿ ಈಗಾಗಲೇ ಶೇ. 99 ರಷ್ಟು ರೈಲ್ವೆ ವಿದ್ಯುದೀಕರಣ ಪೂರ್ಣಗೊಂಡಿದ್ದು, ಕೇವಲ ಶೇ. 1 ರಷ್ಟು ಮಾತ್ರ ಬಾಕಿ ಇತ್ತು. ವಿಶೇಷವಾಗಿ ಸಕಲೇಶಪುರದಿಂದ ಕುಕ್ಕೆ ಸುಬ್ರಮಣ್ಯದ ವರೆಗಿನ ಅತ್ಯಂತ ಕಠಿಣವಾದ 55 ಕಿಲೋಮೀಟರ್ ಘಾಟಿ ಪ್ರದೇಶದ ವಿದ್ಯುದೀಕರಣ ಬಾಕಿ ಉಳಿದಿತ್ತು. ಇದನ್ನು ನಾಲ್ಕೈದು ಬಾರಿ ಅಧಿಕಾರಿಗಳೊಂದಿಗೆ ಖುದ್ದಾಗಿ ಭೇಟಿ ನೀಡಿ, ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿ ಈಗ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ,” ಎಂದರು.
ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ.. ಕರ್ನಾಟಕದಲ್ಲಿ 4 ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಬದಲಾವಣೆ
ಜೂನ್ 3 ರ ಪ್ರಾಯೋಗಿಕ ಸಂಚಾರದ ಬೆನ್ನಲ್ಲೇ, ಮುಂದಿನ 15 ರಿಂದ 20 ದಿನಗಳ ಒಳಗೆ ಬೆಂಗಳೂರಿನಿಂದ ಮಂಗಳೂರಿಗೆ ಮತ್ತು ಮಂಗಳೂರಿನಿಂದ ಬೆಂಗಳೂರಿಗೆ ವಂದೇ ಭಾರತ್ ರೈಲಿನ ಅಧಿಕೃತ ವಾಣಿಜ್ಯ ಸಂಚಾರ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈಗಾಗಲೇ ಹಸಿರು ನಿಶಾನೆ ತೋರಿಸಿದ್ದಾರೆ ಎಂದು ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ. ಈ ರೈಲು ಆರಂಭವಾದರೆ ಕರಾವಳಿ ಮತ್ತು ರಾಜಧಾನಿ ನಡುವಿನ ಪ್ರಯಾಣದ ಸಮಯ ಗಣನೀಯವಾಗಿ ಉಳಿತಾಯವಾಗಲಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


