ಪುತ್ತೂರು: ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಶಾಲೆಯಲ್ಲಿ ಮಕ್ಕಳಿಗಾಗಿ “ಸಂಸ್ಕಾರ ಸುಧಾ” ಬೇಸಿಗೆ ಶಿಬಿರವನ್ನು ಭಾನುವಾರ ಉದ್ಘಾಟಿಸಲಾಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ವೇದಮೂರ್ತಿ ಕೇಕಣಾಜೆ ಕೇಶವ ಭಟ್, “ಮಕ್ಕಳಿಗೆ ಮನೆಯಲ್ಲಿ ಸಿಗಬೇಕಾದ ಸಂಸ್ಕಾರಗಳು ಇಂದಿನ ದಿನಗಳಲ್ಲಿ ಹಲವೆಡೆ ಕಾಣೆಯಾಗುತ್ತಿವೆ. ಆದರೆ ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಸಂಸ್ಕಾರಗಳು ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ ಸಂಸ್ಕಾರ ಬೆಳೆಸುವ ಶಿಬಿರಗಳಂತಹ ಕಾರ್ಯಕ್ರಮಗಳು ಶ್ಲಾಘನೀಯ” ಎಂದು ಹೇಳಿದರು.

ಭಾರತವು ಒಂದು ಕಾಲದಲ್ಲಿ ಉನ್ನತ ಸಂಸ್ಕೃತಿಯನ್ನು ಹೊಂದಿದ ದೇಶವಾಗಿತ್ತು. ಮಧ್ಯಕಾಲದಲ್ಲಿ ಸಂಸ್ಕೃತಿಯ ಕೊಂಡಿ ದುರ್ಬಲಗೊಂಡ ಪರಿಣಾಮವಾಗಿ ವ್ಯವಸ್ಥೆಯಲ್ಲಿ ಹಿನ್ನಡೆ ಕಂಡುಬಂದಿತು. ಇಂತಹ ಸಂದರ್ಭದಲ್ಲಿ ಮೌಲ್ಯಾಧಾರಿತ ಶಿಕ್ಷಣದ ಮೂಲಕ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಇದು ಸೂಕ್ತ ಕಾಲ ಎಂದು ಅವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಮೇ 7 ರಂದು ಅಂಬಿಕಾ ಸಂಸ್ಥೆಗಳ ರಜತ ಮಹೋತ್ಸವ ಸಮಾರೋಪ: ಶೃಂಗೇರಿ ಶ್ರೀ ಭೇಟಿ

ಶಿಬಿರವು ಕೇವಲ ಕಲಿಕೆಯಲ್ಲ, ವ್ಯಕ್ತಿತ್ವ ವಿಕಾಸದ ವೇದಿಕೆಯಾಗಿದೆ. ಶಿಕ್ಷಣದ ಮೂಲಕ ಅಂತರಂಗ ವಿಕಸಿಸಬೇಕು, ಅಜ್ಞಾನದ ಕತ್ತಲೆ ದೂರವಾಗಬೇಕು. ಸಂಸ್ಕಾರಗಳನ್ನು ಅಳವಡಿಸಿಕೊಂಡು ನಿಷ್ಠಾವಂತ ಹಾಗೂ ಶೀಲವಂತ ವ್ಯಕ್ತಿಗಳಾಗಿ ಬೆಳೆದು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.
ಧರ್ಮಾಭ್ಯುದಯ–ಧರ್ಮ ಶಿಕ್ಷಣ ತಾಲೂಕು ಸಮಿತಿಯ ಅಧ್ಯಕ್ಷ ದಂಬೆಕಾನ ಸದಾಶಿವ ರೈ ಮಾತನಾಡಿ, ಪ್ರತಿದಿನ ದೇವರನ್ನು ಸ್ಮರಿಸುವುದು ಮತ್ತು ತಾಯಿ ಶಾರದೆಯ ಆಶೀರ್ವಾದವನ್ನು ಪಡೆಯುವುದು ಜೀವನದ ಸಾರ್ಥಕತೆಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ, ಉತ್ತಮ ಮೌಲ್ಯಗಳನ್ನು ಸಮಾಜಕ್ಕೆ ನೀಡುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ. ಭಾರತೀಯರಲ್ಲಿ ಕಂಡುಬರುವ ಕೀಳರಿಮೆ ದೂರವಾಗಲು ಶಿಕ್ಷಣವೇ ಪ್ರಮುಖ ಸಾಧನ. ಭಾರತದ ಸಂಸ್ಕೃತಿ ಮತ್ತು ಪರಂಪರೆ ವಿಶ್ವದಲ್ಲೇ ಶ್ರೇಷ್ಠವಾದುದು ಎಂದು ಹೇಳಿದರು.
ವೇದಿಕೆಯಲ್ಲಿ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ ಉಪಸ್ಥಿತರಿದ್ದರು. ಅನುಶ್ರೀ ಪ್ರಾರ್ಥನೆ ನೆರವೇರಿಸಿದರು. ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ ಸ್ವಾಗತಿಸಿದರು. ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

