ಅರಬೈಲ್ ಘಾಟ್ ಭೀಕರ ದುರಂತ: ಮೃತರ ಸಂಖ್ಯೆ 6ಕ್ಕೆ ಏರಿಕೆ; ಆಸ್ಪತ್ರೆಗೆ ಸಾಗಿಸುವಾಗ ಮತ್ತೊಬ್ಬ ಯುವಕ ಸಾವು

ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್‌ನ ಬಳಗಾರ್ ಬಳಿ ಇಂದು (ಜುಲೈ 9, 2026) ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಪ್ರವಾಸಿಗರು ಪ್ರಯಾಣಿಸುತ್ತಿದ್ದ ತೂಫಾನ್ ಕ್ರೂಸರ್ ವಾಹನ ಹಾಗೂ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಐದು ಜನ ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಯುವಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ.

ಅಪಘಾತಕ್ಕೊಳಗಾದ ತೂಫಾನ್ ಕ್ರೂಸರ್ ವಾಹನದಲ್ಲಿದ್ದ (KA 19 AA 5920) ಚಾಲಕ ಸೇರಿ ಒಟ್ಟು 9 ಜನರು ಧಾರವಾಡ ಮೂಲದವರಾಗಿದ್ದಾರೆ. ಇವರೆಲ್ಲರೂ ಸ್ವಿಗ್ಗಿ (Swiggy) ಸಂಸ್ಥೆಯಲ್ಲಿ ಪಾರ್ಟ್ ಟೈಮ್ ಡೆಲಿವರಿ ಬಾಯ್ಸ್ ಆಗಿ ಕೆಲಸ ಮಾಡುತ್ತಿದ್ದರು. ಬುಧವಾರ (ಜುಲೈ 8) ರಾತ್ರಿ ಇವರೆಲ್ಲರೂ ಜೊತೆಯಾಗಿ ಧರ್ಮಸ್ಥಳ ಹಾಗೂ ಚಿಕ್ಕಮಗಳೂರು ಪ್ರವಾಸಕ್ಕೆಂದು ಟೂರ್ ಹೊರಟಿದ್ದರು. ಆದರೆ, ಇಂದು ಮುಂಜಾನೆ ಅರಬೈಲ್ ಘಟ್ಟದ ಬಳಗಾರ್ ತಲುಪುತ್ತಿದ್ದಂತೆ ಎದುರಿನಿಂದ ಬಂದ ಲಾರಿ (KA 22 AA 1008) ಹಾಗೂ ಕ್ರೂಸರ್ ನಡುವೆ ಭೀಕರ ಅಪಘಾತ ನಡೆದಿದೆ. ಡಿಕ್ಕಿಯ ರಭಸಕ್ಕೆ ಕ್ರೂಸರ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.

Advertisement

ಅಪಘಾತದ ಭೀಕರತೆಗೆ ಬಲಿಯಾದ ಆರೂ ಜನ ಧಾರವಾಡದ ನಿವಾಸಿಗಳಾಗಿದ್ದು, ಮೃತರನ್ನು ಬಸವರಾಜ್ (48 ವರ್ಷ), ಅಭಿಷೇಕ್ ಈಶ್ವರ್ (28 ವರ್ಷ), ಅಕ್ಷಯ (26 ವರ್ಷ), ಅಭಿಷೇಕ್ (26 ವರ್ಷ)
ಸಂಜೀವ / ಸಂಜಯ ಅಂಗಡಿ (33 ವರ್ಷ – ಕ್ರೂಸರ್ ಚಾಲಕ) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಯುವಕ ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರು ಎಳೆದಿದ್ದಾರೆ.

ಇದನ್ನೂ ಓದಿ: ಕಾರಿನ ಬ್ರೇಕ್-ಕ್ಲಚ್ ನಡುವೆ ಸಿಲುಕಿದ ಎಳನೀರು! ಅರ್ಚಕ ಸೇರಿ ಇಬ್ಬರು ಭೀಕರ ಅಪಘಾತಕ್ಕೆ ಬಲಿ

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಉಳಿದ ಮೂವರು ತಕ್ಷಣವೇ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ತೀವ್ರ ನಿಗಾ ಘಟಕದಲ್ಲಿ (ICU) ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕ್ರೂಸರ್‌ನಲ್ಲಿದ್ದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ. ಒಟ್ಟಿಗೆ ದುಡಿಯುತ್ತಿದ್ದ ಸ್ನೇಹಿತರೆಲ್ಲರೂ ಪ್ರವಾಸದ ಹೆಸರಿನಲ್ಲಿ ಹೆಣವಾಗಿ ಮನೆಗೆ ಮರಳುತ್ತಿರುವುದನ್ನು ಕಂಡು ಧಾರವಾಡದ ಅವರ ಕುಟುಂಬಸ್ಥರ ಹಾಗೂ ಸಹೋದ್ಯೋಗಿಗಳ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *