ಕಾರಿನ ಬ್ರೇಕ್-ಕ್ಲಚ್ ನಡುವೆ ಸಿಲುಕಿದ ಎಳನೀರು! ಅರ್ಚಕ ಸೇರಿ ಇಬ್ಬರು ಭೀಕರ ಅಪಘಾತಕ್ಕೆ ಬಲಿ

ವಿಜಯವಾಡ: ಮಗನ ಮದುವೆ ಮುಗಿಸಿಕೊಂಡು ಸಡಗರದಿಂದ ಮನೆಗೆ ಮರಳುತ್ತಿದ್ದ ಕುಟುಂಬದಲ್ಲಿ ವಿಧಿಯ ಆಟ ಭೀಕರ ದುರಂತವಾಗಿ ಪರಿಣಮಿಸಿದೆ. ಕಾರಿನ ಬ್ರೇಕ್ ಹಾಗೂ ಕ್ಲಚ್ ನಡುವೆ ಎಳನೀರು ಸಿಲುಕಿಕೊಂಡಿದ್ದರಿಂದ ಕಾರು ನಿಯಂತ್ರಣ ತಪ್ಪಿ ಸಂಭವಿಸಿದ ಸರಣಿ ಅಪಘಾತದಲ್ಲಿ ಅರ್ಚಕ ಸೇರಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯ ಜಕ್ಕಂಪುಡಿ ಪ್ರದೇಶದ ವಿಜಯವಾಡ ಬೈಪಾಸ್‌ನಲ್ಲಿ ನಡೆದಿದೆ.

ರಾಜಮಹೇಂದ್ರವರಂ ನಿವಾಸಿ ದುವ್ವುರಿ ಹರಿಪ್ರಸಾದ್ (52) ಮೃತಪಟ್ಟ ದುರ್ದೈವಿ ಅರ್ಚಕರಾಗಿದ್ದಾರೆ. ಇವರ ಜೊತೆಗೆ ಕಾರು ಡಿಕ್ಕಿ ಹೊಡೆದ ಬೈಕ್ ಸವಾರ ಕೂಡ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಮೃತ ಹರಿಪ್ರಸಾದ್ ಅವರ ಕಿರಿಯ ಮಗನ ಮದುವೆ ಗುರುವಾರ ಹೈದರಾಬಾದ್‌ನಲ್ಲಿರುವ ವಧುವಿನ ಸ್ವಗೃಹದಲ್ಲಿ ನಡೆದಿತ್ತು. ಮದುವೆ ಮುಗಿಸಿ ಶುಕ್ರವಾರ ಮಧ್ಯಾಹ್ನ ಕುಟುಂಬಸ್ಥರೆಲ್ಲರೂ ಒಂದು ಕಾರಿನಲ್ಲಿ ರಾಜಮಹೇಂದ್ರವರಂಗೆ ಹೊರಟಿದ್ದರು. ಮತ್ತೊಂದು ಕಾರಿನಲ್ಲಿ ಪೂಜಾ ಸಾಮಗ್ರಿಗಳು ಹಾಗೂ ಎಳನೀರುಗಳನ್ನು ಇಟ್ಟುಕೊಂಡು ಹರಿಪ್ರಸಾದ್ ಅವರು ತಮ್ಮ ಸಂಬಂಧಿಯೊಬ್ಬರ ಜೊತೆ ಪ್ರಯಾಣಿಸುತ್ತಿದ್ದರು.

Advertisement

ವಿಜಯವಾಡ ಬಳಿಯ ನಲ್ಲಗುಂಟದಲ್ಲಿ ಹರಿಪ್ರಸಾದ್ ಅವರ ಸಂಬಂಧಿ ಕಾರಿನಿಂದ ಇಳಿದಿದ್ದಾರೆ. ತದನಂತರ ಹರಿಪ್ರಸಾದ್ ಅವರೊಬ್ಬರೇ ಕಾರು ಚಲಾಯಿಸಿಕೊಂಡು ಗೊಲ್ಲಪುಡಿ ಬೈಪಾಸ್ ರಸ್ತೆಯ ಬಳಿ ತೆರಳುತ್ತಿದ್ದರು.

ಇದನ್ನೂ ಓದಿ: ಮೊಹರಂ ವೇಳೆ 15 ಸಾವಿರ ಜನರನ್ನು ಸಾಯಿಸಲು ಸ್ಕೆಚ್ ಹಾಕಿದ್ದ ವ್ಯಕ್ತಿ ಸೆರೆ

ಅಪಘಾತಕ್ಕೆ ಕಾರಣವಾಯ್ತಾ ಎಳನೀರು?:

ಬೈಪಾಸ್ ರಸ್ತೆಯಲ್ಲಿ ಸಾಗುತ್ತಿದ್ದಾಗ ಕಾರು ಮೊದಲು ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರ ಪ್ರಕಾರ, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಹಿಂದಿನ ಸೀಟಿನಲ್ಲಿದ್ದ ಎಳನೀರು ಮುಂಭಾಗಕ್ಕೆ ಹಾರಿ ಬಂದು, ಚಾಲಕನ ಸೀಟಿನ ಕೆಳಗಿನ ಬ್ರೇಕ್ ಮತ್ತು ಕ್ಲಚ್ ನಡುವೆ ಸಿಲುಕಿಕೊಂಡಿದೆ. ಇದರಿಂದಾಗಿ ಹರಿಪ್ರಸಾದ್ ಅವರಿಗೆ ಬ್ರೇಕ್ ಒತ್ತಲು ಸಾಧ್ಯವಾಗದೆ ಕಾರು ಸಂಪೂರ್ಣ ನಿಯಂತ್ರಣ ತಪ್ಪಿ ಮುಂಭಾಗದಲ್ಲಿದ್ದ ದೊಡ್ಡ ಕಂಟೇನರ್‌ಗೆ ಭೀಕರವಾಗಿ ಅಪ್ಪಳಿಸಿದೆ.

ಘಟನೆಯ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಹರಿಪ್ರಸಾದ್ ಹಾಗೂ ಬೈಕ್ ಸವಾರ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಜಯವಾಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮತ್ತಷ್ಟು ಓದಲು ಇಲ್ಲಿ  ಕ್ಲಿಕ್ ಮಾಡಿ

Leave a Reply

Your email address will not be published. Required fields are marked *