ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪ್ರಮುಖ ಸಂಪರ್ಕ ಕೊಂಡಿಯಾದ ಬಿ.ಸಿ. ರೋಡ್ (BC Road) ಫ್ಲೈಓವರ್ ಮೇಲೆ ಭೀಕರ ಅಪಘಾತವೊಂದು ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿದ ಬೈಕ್ವೊಂದು ಬ್ರಿಡ್ಜ್‌ನಿಂದ ಕೆಳಗಿನ ಸರ್ವಿಸ್ ರಸ್ತೆಗೆ ಬಿದ್ದಿದೆ. ಈ ದುರಂತದಲ್ಲಿ ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿದ್ದಾನೆ. ಸೋಮವಾರ (ನವೆಂಬರ್ 9) ಈ ಅಪಘಾತ ಸಂಭವಿಸಿದೆ.
ಸೋಮವಾರ ಬಿ.ಸಿ. ರೋಡ್ ಫ್ಲೈಓವರ್ ಮೇಲೆ ಎರಡು ಬೈಕ್ಗಳು ಸಂಚರಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಎರಡು ಬೈಕ್‌ಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿ ಈ ಅಪಘಾತ ಸಂಭವಿಸಿದೆಯೇ ಅಥವಾ ಸವಾರನೇ ಸ್ವತಃ ನಿಯಂತ್ರಣ ತಪ್ಪಿ ಫ್ಲೈಓವರ್ ತಡೆಗೋಡೆಯಿಂದ ಕೆಳಗೆ ಬಿದ್ದಿದ್ದಾನೆಯೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಫ್ಲೈಓವರ್‌ನ ಮೇಲಿಂದ ಬೈಕ್ ಹಾಗೂ ಸವಾರ ಇಬ್ಬರೂ ಕೆಳಗಿನ ಸರ್ವಿಸ್ ರಸ್ತೆಗೆ ಅಪ್ಪಳಿಸಿದ್ದಾರೆ.

ಬೈಕ್ ಹಾಗೂ ಸವಾರ ಮೇಲಿಂದ ಕೆಳಗೆ ಬೀಳುವ ಸಂದರ್ಭದಲ್ಲಿ ಅದೃಷ್ಟವಶಾತ್ ಸರ್ವಿಸ್ ರಸ್ತೆಯಲ್ಲಿ ಯಾವುದೇ ವಾಹನಗಳು ಸಂಚರಿಸುತ್ತಿರಲಿಲ್ಲ. ಇದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಅಪಘಾತದ ಸಮಯದಲ್ಲಿ ಸವಾರ ಹೆಲ್ಮೆಟ್ ಧರಿಸಿದ್ದ ಕಾರಣ ಆತನ ತಲೆಗೆ ರಕ್ಷಣೆ ಸಿಕ್ಕಿದ್ದರೂ, ಭಾರಿ ಎತ್ತರದಿಂದ ಬಿದ್ದಿದ್ದರಿಂದ ಆತನಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ.
ಇದನ್ನೂ ಓದಿ: ಬಂಟ್ವಾಳ: ಸ್ಟುಡಿಯೋ ಮಾಲೀಕನ ಕೊಲೆ ಯತ್ನ ಪ್ರಕರಣ; ನಾಲ್ವರು ಅಪರಾಧಿಗಳಿಗೆ 7 ವರ್ಷ ಜೈಲು

ಇದೇ ಬಿ.ಸಿ. ರೋಡ್ ಫ್ಲೈಓವರ್‌ನಲ್ಲಿ 2016ರಲ್ಲೂ ಇಂತಹುದೇ ಭೀಕರ ಅಪಘಾತ ಸಂಭವಿಸಿತ್ತು. ಅಂದು ರಾತ್ರಿ ವೇಳೆ ಚಲಿಸುತ್ತಿದ್ದ ಬೈಕ್ ಫ್ಲೈಓವರ್‌ನ ತಡೆಗೋಡೆಗೆ ಡಿಕ್ಕಿಯಾಗಿ ಕೆಳಗಿನ ರಸ್ತೆಗೆ ಬಿದ್ದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದನು. ಇದೀಗ ಮತ್ತೆ ಅದೇ ಮಾದರಿಯ ಅಪಘಾತ ನಡೆದಿರುವುದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ


