ಆ್ಯಪಲ್ ಐಫೋನ್ ಬಿಡಿಭಾಗಗಳ ತಯಾರಿಕ ಘಟಕದಲ್ಲಿ ಅವಘಡ: ಮೂವರು ಕಾರ್ಮಿಕರು ಸಾವು

Tata Electronics Hosur factory toxic gas incident

ಹೊಸೂರು: ತಮಿಳುನಾಡಿನ ಹೊಸೂರಿನಲ್ಲಿರುವ ಆ್ಯಪಲ್ ಐಫೋನ್ ಬಿಡಿಭಾಗಗಳನ್ನು ತಯಾರಿಸುವ ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ವಿಷಕಾರಿ ಅನಿಲ ಸೋರಿಕೆಯಾದ ಪರಿಣಾಮ ಮೂವರು ಗುತ್ತಿಗೆ ಕಾರ್ಮಿಕರು ಮೃತಪಟ್ಟಿದ್ದಾರೆ. ಸೋಮವಾರ ರಾತ್ರಿ ನಿರ್ವಹಣಾ ಕಾಮಗಾರಿ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.

ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿರುವ ಎಫ್ಲುಯೆಂಟ್ ಟ್ರೀಟ್‌ಮೆಂಟ್ ಪ್ಲಾಂಟ್‌ನಲ್ಲಿ (ತ್ಯಾಜ್ಯ ನೀರು ಸಂಸ್ಕರಣಾ ಘಟಕ) ಈ ಘಟನೆ ನಡೆದಿದೆ. ಅಮೆರಿಕದ ಇಕೋಲ್ಯಾಬ್ ಕಂಪನಿಯ ಅಂಗಸಂಸ್ಥೆಯಾದ ನಲ್ಕೊ ವಾಟರ್ ಈ ಘಟಕವನ್ನು ನಿರ್ವಹಿಸುತ್ತಿದೆ.

Advertisement

ಜಿಲ್ಲಾಧಿಕಾರಿ ಮಟ್ಟದ ಅಧಿಕಾರಿ ದಿನೇಶ್ ಕುಮಾರ್ ಅವರ ಪ್ರಕಾರ, ಕಾರ್ಮಿಕರು ಬಾಹ್ಯ ನ್ಯಾನೋ-ಫಿಲ್ಟ್ರೇಶನ್ ಟ್ಯಾಂಕ್ ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ವಿಷಕಾರಿ ಅನಿಲವನ್ನು ಉಸಿರಾಡಿದ್ದಾರೆ. ಇದರಿಂದಾಗಿ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅದಾಗ್ಯೂ, ಮೂವರ ಸಾವಿಗೆ ನಿಖರ ಕಾರಣ ತನಿಖೆಯ ಬಳಿಕ ಸ್ಪಷ್ಟವಾಗಬೇಕಿದೆ.

ಘಟನೆಯ ಬಗ್ಗೆ ಸಮಗ್ರ ತನಿಖೆ

ಈ ದುರ್ಘಟನೆಯ ಕುರಿತು ಟಾಟಾ ಎಲೆಕ್ಟ್ರಾನಿಕ್ಸ್, ಆ್ಯಪಲ್ ಮತ್ತು ತಮಿಳುನಾಡು ಸರ್ಕಾರದ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ ಎಂದು ರಾಜ್ಯದ ಅಧಿಕಾರಿಗಳು ಹಾಗೂ ಪ್ರಕರಣದ ಮಾಹಿತಿ ಹೊಂದಿರುವ ಉದ್ಯಮ ವಲಯದ ಮೂಲಗಳು ತಿಳಿಸಿವೆ.

Advertisement

ತಮಿಳುನಾಡಿನ ಕೈಗಾರಿಕಾ ಸಚಿವೆ ವಿರುಧೈ ಮಾಗಲ್ ಕೀರ್ತನಾ ಅವರು ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದು, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ತನಿಖೆಯ ವರದಿಯ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಟಾಟಾ ಎಲೆಕ್ಟ್ರಾನಿಕ್ಸ್, ಆ್ಯಪಲ್ ಮತ್ತು ನಲ್ಕೊ ವಾಟರ್ ಕಂಪನಿಗಳು ವರದಿ ಪ್ರಕಟಿಸುವ ಸಮಯದವರೆಗೆ ಪ್ರತಿಕ್ರಿಯೆ ನೀಡಿರಲಿಲ್ಲ.

Advertisement

ಭಾರತದ ಐಫೋನ್ ಉತ್ಪಾದನೆಗೆ ಪ್ರಮುಖ ಕೇಂದ್ರ

ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವ ಆ್ಯಪಲ್ ಕಂಪನಿಗೆ ಭಾರತ ಪ್ರಮುಖ ಉತ್ಪಾದನಾ ಕೇಂದ್ರವಾಗಿ ಬೆಳೆಯುತ್ತಿದೆ. ಪ್ರಸ್ತುತ ಜಾಗತಿಕ ಐಫೋನ್ ಉತ್ಪಾದನೆಯಲ್ಲಿ ಭಾರತದ ಪಾಲು ಸುಮಾರು ಶೇ.25ರಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಟಾಟಾ ಸಮೂಹದ ಭಾಗವಾಗಿರುವ ಟಾಟಾ ಎಲೆಕ್ಟ್ರಾನಿಕ್ಸ್ ಭಾರತದಲ್ಲಿ ಐಫೋನ್ ಜೋಡಣೆ ಪ್ರಕ್ರಿಯೆಯ ಸುಮಾರು ಶೇ.40ರಷ್ಟು ಪಾಲನ್ನು ಹೊಂದಿದೆ. ಉಳಿದ ಪ್ರಮುಖ ಪಾಲನ್ನು ಫಾಕ್ಸ್‌ಕಾನ್ ನಿರ್ವಹಿಸುತ್ತಿದೆ.

ಇದನ್ನೂ ಓದಿ: ಅಂದು ನಾನು ಪ್ರಧಾನಿಯಾಗದಿರಲು ಆ ಇಬ್ಬರು ಕಾರಣ: ‘ಬಿಲಾಂಗಿಂಗ್’ ಪುಸ್ತಕದಲ್ಲಿ ರಾಜಕೀಯ ರಹಸ್ಯ ಬಿಚ್ಚಿಟ್ಟ ಸೋನಿಯಾ ಗಾಂಧಿ

ಆದರೆ, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹೊಸೂರು ಘಟಕ ಈ ವಾರ ಮುಚ್ಚಲ್ಪಟ್ಟಿದ್ದರಿಂದ ಘಟನೆಯಿಂದ ಉತ್ಪಾದನೆಗೆ ಯಾವುದೇ ತೊಂದರೆಯಾಗಿಲ್ಲ ಎಂದು ಉದ್ಯಮ ವಲಯದ ಮೂಲಗಳು ತಿಳಿಸಿವೆ.

ಈ ಹಿಂದೆಯೂ ಎದುರಾಗಿದ್ದ ಸವಾಲುಗಳು

ಹೊಸೂರಿನ ಟಾಟಾ ಘಟಕವು ಇತ್ತೀಚಿನ ವರ್ಷಗಳಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿದೆ. 2024ರ ಸೆಪ್ಟೆಂಬರ್‌ನಲ್ಲಿ ಐಫೋನ್ ಬಿಡಿಭಾಗಗಳನ್ನು ತಯಾರಿಸುವ ಟಾಟಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಉತ್ಪಾದನೆ ಸ್ಥಗಿತಗೊಂಡಿತ್ತು.

ಇದೇ ವರ್ಷ, ಅಂತರ್ಜಲ ಮಾಲಿನ್ಯದ ಆರೋಪದ ಹಿನ್ನೆಲೆಯಲ್ಲಿ ಘಟಕವನ್ನು ಮುಚ್ಚುವ ಸಾಧ್ಯತೆಯ ಬಗ್ಗೆ ರಾಜ್ಯದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಆದರೆ, ಬಳಿಕ ಈ ವಿಚಾರವನ್ನು ಕೈಬಿಡಲಾಗಿತ್ತು ಎಂದು ವರದಿಯಾಗಿದೆ.

ಇದಲ್ಲದೆ, ಇದೇ ಆವರಣದಲ್ಲಿರುವ ಮತ್ತೊಂದು ಐಫೋನ್ ಉತ್ಪಾದನಾ ಘಟಕದ ಮೇಲೆ ನಡೆದ ರ‍್ಯಾನ್ಸಮ್‌ವೇರ್ ಸೈಬರ್ ದಾಳಿಯಿಂದಾಗಿ, ಆಗ ಬಿಡುಗಡೆಯಾಗದಿದ್ದ ಐಫೋನ್ 18 ಪ್ರೊಗೆ ಸಂಬಂಧಿಸಿದ ದಾಖಲೆಗಳು ಸೋರಿಕೆಯಾಗಿದ್ದವು ಎಂದು ರಾಯಿಟರ್ಸ್ ವರದಿ ಮಾಡಿತ್ತು.

ಫಾಕ್ಸ್‌ಕಾನ್, ಹ್ಯುಂಡೈ, ವಿನ್ಫಾಸ್ಟ್ ಮತ್ತು ಬಿಎಂಡಬ್ಲ್ಯು ಸೇರಿದಂತೆ ಹಲವು ಜಾಗತಿಕ ಕಂಪನಿಗಳ ಉತ್ಪಾದನಾ ಘಟಕಗಳನ್ನು ಹೊಂದಿರುವ ತಮಿಳುನಾಡು ಭಾರತದ ಪ್ರಮುಖ ಕೈಗಾರಿಕಾ ರಾಜ್ಯಗಳಲ್ಲಿ ಒಂದಾಗಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ