ಬೆಂಗಳೂರು : ಸಿಲಿಕಾನ್ ಸಿಟಿಯ ರಸ್ತೆ ಗುಂಡಿಗಳ ಅವಾಂತರಕ್ಕೆ ಮತ್ತೊಂದು ಭಯಾನಕ ಘಟನೆ ಸಾಕ್ಷಿಯಾಗಿದೆ. ನಗರದ ವರ್ತೂರು ಸಮೀಪದ ಗುಂಜೂರುಪಾಳ್ಯ ಸಿಡಿಪಿ ರಸ್ತೆಯಲ್ಲಿ (Gunjurpalya CDP Road) ರಸ್ತೆ ಗುಂಡಿ ತಪ್ಪಿಸಲು ಯತ್ನಿಸುತ್ತಿದ್ದ ಬೈಕ್ ಸವಾರನಿಗೆ ಹಿಂಬದಿಯಿಂದ ಬಂದ ವಾಟರ್ ಟ್ಯಾಂಕರ್ ಡಿಕ್ಕಿಯಾಗಿದೆ. ಟ್ಯಾಂಕರ್ ಬೈಕ್ ಮೇಲೆಯೇ ಹರಿದರೂ, ಸಮಯಪ್ರಜ್ಞೆಯಿಂದ ಪಕ್ಕಕ್ಕೆ ಜಿಗಿದ ಬೈಕ್ ಸವಾರ ಸಾವು-ಬದುಕಿನ ನಡುವೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ವಿದ್ಯುತ್ ಸಾಗರ್ ಎಂಬ ಸಾರ್ವಜನಿಕ ಪ್ರಯಾಣಿಕರೊಬ್ಬರು ಹದಗೆಟ್ಟ ರಸ್ತೆಯ ದುಸ್ಥಿತಿಯನ್ನು ವೀಡಿಯೊ ರೆಕಾರ್ಡ್ ಮಾಡುತ್ತಿದ್ದ ವೇಳೆ, ಈ ಭೀಕರ ಅಪಘಾತ ಆಕಸ್ಮಿಕವಾಗಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Video:
ಅಪಘಾತ ಎಸಗಿದ ವಾಟರ್ ಟ್ಯಾಂಕರ್‌ನಲ್ಲಿ ನಂಬರ್ ಪ್ಲೇಟ್ ಇರಲಿಲ್ಲ. ಜೊತೆಗೆ, ಟ್ಯಾಂಕರ್ ಚಾಲಕನ ಬಳಿ ಚಾಲನಾ ಪರವಾನಗಿ (Driving License) ಕೂಡ ಇರಲಿಲ್ಲ ಹಾಗೂ ಆತ ವಾಹನ ಚಾಲನೆ ಕಲಿಯುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ: ಮಳೆಗಾಲದಲ್ಲಿ ಕಾಡುತ್ತಿದೆಯೇ ವಸಡಿನ ರಕ್ತಸ್ರಾವ, ಬಾಯಿ ದುರ್ವಾಸನೆ?: ಕಾರಣ ನಿಮ್ಮ ಈ ಹವ್ಯಾಸಗಳೇ ಇರಬಹುದು
ಘಟನೆ ಬಳಿಕ ಸಾರ್ವಜನಿಕರು ಟ್ಯಾಂಕರ್ ಚಾಲಕನನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಟೆಕ್ ಕಾರಿಡಾರ್ ವ್ಯಾಪ್ತಿಯಲ್ಲಿ ದಿನೇ ದಿನೇ ರಸ್ತೆ ಗುಂಡಿಗಳ ಹಾವಳಿ ಹೆಚ್ಚುತ್ತಿದ್ದರೂ ಸ್ಥಳೀಯ ಆಡಳಿತ ಹಾಗೂ ಜಿಬಿಎ (GBA) ನಿರ್ಲಕ್ಷ್ಯ ವಹಿಸಿದೆ ಎಂದು ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

