ಬೆಂಗಳೂರು: ಅಂತರಜಾತಿ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಪ್ರಿಯತಮೆಗೆ ಕೈಕೊಟ್ಟು ಪ್ರಿಯಕರ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮದುವೆಯಾಗುವುದಾಗಿ ನಂಬಿಸಿ ವಂಚಿಸಿರುವ ಬಗ್ಗೆ ಯುವತಿ ಕಣ್ಣೀರಿಟ್ಟಿದ್ದು, ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ವರದಿಯಾಗಿದೆ.
ಚನ್ನರಾಯಪಟ್ಟಣ ತಾಲೂಕಿನ ಕಲ್ಲೇಸೋಮಹಳ್ಳಿ ಗ್ರಾಮದ ಸೂರ್ಯ (26) ಹಾಗೂ ಕಾಸರಗೋಡು ಮೂಲದ ಯುವತಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಕಳೆದ ಐದು ತಿಂಗಳಿಂದ ಇಬ್ಬರೂ ಲಿವ್-ಇನ್ ರಿಲೇಷನ್ಶಿಪ್ನಲ್ಲಿ (Live-in Relationship) ವಾಸಿಸುತ್ತಿದ್ದರು. ಈ ವಿಷಯವನ್ನು ಸೂರ್ಯ ತಮ್ಮ ಪೋಷಕರಿಗೂ ತಿಳಿಸಿದ್ದು, ಮದುವೆಗೆ ಸೂರ್ಯನ ಮನೆಯವರು ಆರಂಭದಲ್ಲಿ ಒಪ್ಪಿದ್ದರು ಎನ್ನಲಾಗಿದೆ. ಆದರೆ ಯುವತಿಯ ತಾಯಿ ಮದುವೆಗೆ ನಿರಾಕರಿಸಿ ಸಂಪರ್ಕ ಕಡಿದುಕೊಂಡಿದ್ದರು.
ಸೂರ್ಯನ ಸ್ನೇಹಿತ ಪ್ರವೀಣ್ ಎಂಬುವರು ಸೂರ್ಯನ ಪೋಷಕರಿಗೆ ಯುವತಿಯ ವಿರುದ್ಧ ಇಲ್ಲಸಲ್ಲದ ಸುಳ್ಳುಗಳನ್ನು ಹೇಳಿದ್ದರಿಂದ, ಸೂರ್ಯನ ಪೋಷಕರು ಮದುವೆ ಬೇಡ ಎಂದು ಹಿಂದೆ ಸರಿದಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಕಳೆದ ಸೆಪ್ಟೆಂಬರ್ 24 ರಂದು ಮೊಬೈಲ್ ಫೋನ್ ಅಲ್ಲೇ ಬಿಟ್ಟು ಪ್ರಿಯಕರ ಸೂರ್ಯ ನಾಪತ್ತೆಯಾಗಿದ್ದಾನೆ.
ಸೂರ್ಯನ ಪೋಷಕರನ್ನು ವಿಚಾರಿಸಿದರೆ, “ನಮಗೆ ಏನೂ ಗೊತ್ತಿಲ್ಲ, ಪದೇ ಪದೇ ಫೋನ್ ಮಾಡಿದರೆ ಸರಿ ಇರಲ್ಲ” ಎಂದು ಅವರು ಧಮ್ಕಿ ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೆ, ಯುವತಿ ವಿರುದ್ಧವೇ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಯುವತಿ ಕಣ್ಣೀರಿಟ್ಟಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಗಳು ನಡೆದರೂ ಪ್ರಿಯಕರ ಸೂರ್ಯ ಮಾತ್ರ ಪತ್ತೆಯಾಗಿಲ್ಲ.
ಇದನ್ನೂ ಓದಿ: ಮನೆಮನೆಗೆ ಬಿಲ್ ಕೊಡಲು ಹೋದ ಹೆಸ್ಕಾಂ ಸಿಬ್ಬಂದಿಗೆ ಕಚ್ಚಿದ ನಾಯಿ
ಬರುವ ಗುರುವಾರದವರೆಗೆ ಕಾಯುವುದಾಗಿ, ಒಂದು ವೇಳೆ ಸೂರ್ಯ ಬಂದು ತನ್ನನ್ನು ಮದುವೆಯಾಗದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವತಿ ವೀಡಿಯೋವೊಂದನ್ನು ಮಾಡಿದ್ದಾಳೆ. ತನ್ನ ಸಾವಿಗೆ ಪ್ರಿಯಕರ ಸೂರ್ಯ, ಆತನ ಪೋಷಕರು ಹಾಗೂ ಸ್ನೇಹಿತ ಪ್ರವೀಣ್ ಕಾರಣ ಎಂದು ವೀಡಿಯೋದಲ್ಲಿ ತಿಳಿಸಿದ್ದಾಳೆ.
ಕಳೆದ 15 ದಿನಗಳಿಂದ ಊಟ, ನಿದ್ದೆ ಇಲ್ಲದೆ ನರಳುತ್ತಿದ್ದು, ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಅಳಲು ತೋಡಿಕೊಂಡಿರುವ ಯುವತಿ, ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದು, ಸದ್ಯ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

