Breaking News

“ಯುದ್ಧಗಳಲ್ಲಿ ಪುರುಷರೇ ಸತ್ತರು, ಮಹಿಳೆಯರಲ್ಲ”: ಸೀತಾಮಾತೆಯನ್ನು ‘ಸಾವು ತರುವ ವಸ್ತು’ ಎಂದ ಬಿಜೆಪಿ ಶಾಸಕನಿಗೆ ಸ್ವಪಕ್ಷದ ಮಹಿಳಾ ಶಾಸಕಿಯಿಂದಲೇ ತಿರುಗೇಟು

ಗುಣ: ಮಧ್ಯಪ್ರದೇಶದ ಗುಣದಲ್ಲಿ ನಡೆದ ರಾಜ್ಯಮಟ್ಟದ ‘ಬಲರಾಮ ಮಹೋತ್ಸವ’ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಪನ್ನಾಲಾಲ್ ಶಾಕ್ಯ ಅವರು ಸೀತಾಮಾತೆಯ ಕುರಿತು ನೀಡಿದ ವಿವಾದತ್ಮಕ ಹೇಳಿಕೆ ಭಾರಿ ಸದ್ದು ಮಾಡುತ್ತಿದೆ. ಭಾರತೀಯ ಇತಿಹಾಸ ಮತ್ತು ಮಹಾಕಾವ್ಯಗಳಲ್ಲಿನ ಯುದ್ಧಗಳ ಬಗ್ಗೆ ಮಾತನಾಡುತ್ತಾ, ಅವರು ಸೀತಾಮಾತೆಯನ್ನು “ಮೌತ್ ಕಾ ಸಾಮಾನ” (ಸಾವು ತರುವ ವಸ್ತು/ಸಾಧನ) ಎಂದು ಕರೆದಿದ್ದಾರೆ.

ಯುದ್ಧಗಳಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರತಿಪಾದಿಸಿದ ಶಾಸಕ, “ಇನ್ನೊಬ್ಬರ ಹೆಂಡತಿಯನ್ನು ಕರೆತರುವುದು ತಪ್ಪು, ಆಕೆ ಸಾವು ತರುವ ವಸ್ತು, ಆಕೆಯನ್ನು ಗೌರವದಿಂದ ವಾಪಸ್ ಕಳುಹಿಸು ಎಂದು ರಾವಣನಿಗೆ ಆತನ ಸಹೋದರ ಸಲಹೆ ನೀಡಿದ್ದ” ಎಂದು ಹೇಳಿದರು. ರಾಮಾಯಣ ಯುದ್ಧದಲ್ಲಿ ಪುರುಷರು ಸತ್ತರೆ ಹೊರತು ಮಹಿಳೆಯರಲ್ಲ ಎಂದಿದ್ದಾರೆ.

ಮಹಾಭಾರತ ಯುದ್ಧದಲ್ಲಿ 1 ಕೋಟಿ ಪುರುಷರು ಪ್ರಾಣ ಕಳೆದುಕೊಂಡರು, ಆದರೆ ಮಹಿಳೆಯರು ಸಾಯಲಿಲ್ಲ ಎಂದರು. ಅದೇ ರೀತಿ ಸಂಯೋಗಿತಾಳ ಕಾರಣದಿಂದಾಗಿ ಕನ್ನೌಜ್ ಮತ್ತು ದೆಹಲಿ ನಡುವೆ ಪೃಥ್ವಿರಾಜ್ ಚೌಹಾಣ್‌ಗೆ ಸೇರಿದ 55 ಮಂದಿ ಸಾಮಂತರು ಕೊಲ್ಲಲ್ಪಟ್ಟರು ಎಂದು ಅವರು ಪ್ರತಿಪಾದಿಸಿದರು.ಶಾಸಕ ಶಾಕ್ಯ ಅವರ ಈ ಹೇಳಿಕೆಗೆ ಅದೇ ವೇದಿಕೆಯಲ್ಲಿದ್ದ ಚಾಂಚೌರಾ ಕ್ಷೇತ್ರದ ಬಿಜೆಪಿ ಮಹಿಳಾ ಶಾಸಕಿ ಪ್ರಿಯಾಂಕಾ ಪೆಂಚಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕಾಡಿನ ನಕ್ಸಲರು ಖಾಲಿಯಾಗಿದ್ದಾರೆ, ಈಗ ‘ದಿಮಾಗಿ ನಕ್ಸಲರ’ ವಿರುದ್ಧ ಹೋರಾಟ”: ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ

ಮಾತಿನ ಮಧ್ಯದಲ್ಲೇ ಹಸ್ತಕ್ಷೇಪ ಮಾಡಿದ ಪ್ರಿಯಾಂಕಾ, “ಸಹೋದರ, ನೀವು ಹೇಳುತ್ತಿರುವುದು ತಪ್ಪು. ಮಹಿಳೆಯರೂ ಕೂಡ ಇತಿಹಾಸದಲ್ಲಿ ಅಪಾರ ತ್ಯಾಗ ಮಾಡಿದ್ದಾರೆ. ನಾನು ಕೂಡ ಒಬ್ಬ ಮಹಿಳೆ, ಮಹಿಳೆಯರ ತ್ಯಾಗವನ್ನು ನೀವು ಮರೆಯುತ್ತಿದ್ದೀರಿ” ಎಂದು ವೇದಿಕೆಯಲ್ಲೇ ನೇರವಾಗಿ ತರಾಟೆಗೆ ತೆಗೆದುಕೊಂಡರು. ಗುಣದ ನಾನಾಖೇಡಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಕೃಷಿ ಹಾಗೂ ನೈಸರ್ಗಿಕ ಬೇಸಾಯದ ಕುರಿತು ಚರ್ಚಿಸಲಾಯಿತು. ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವಂತೆ ರೈತರಿಗೆ ಕರೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಭೂಪಾಲ್‌ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *