ಮಂಗಳೂರು: ಬೆಳ್ತಂಗಡಿಯ ಸಂಭೋಲ್ಯದಲ್ಲಿ ನಡೆದ ಬಾಲಕ ಸುಮಂತ್‌ನ ಅನುಮಾನಾಸ್ಪದವಾಗಿ ಕೊಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸುವಂತೆ ಪುತ್ತೂರು ಬಿ.ಜಿ.ಎಸ್.ಬಿ (BGSB) ಸಂಘದ ಅಧ್ಯಕ್ಷರಾದ ರಮೇಶ್ ಪ್ರಭು ನೇತೃತ್ವದ ನಿಯೋಗವೊಂದು ದಕ್ಷಿಣ ಕನ್ನಡ ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿಗಳನ್ನು (SP) ಭೇಟಿಯಾಗಿ ಮನವಿ ಸಲ್ಲಿಸಿದೆ. ಇದೇ ವೇಳೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಕೂಡ ಇದ್ದರು.
ಮೃತ ಬಾಲಕ ಸುಮಂತ್‌ನ ಪೋಷಕರು ಹಾಗೂ ವಿವಿಧ ಸಾಮಾಜಿಕ ಸಂಘ-ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಮಂಗಳೂರಿನ ಎಸ್‌ಪಿ ಕಚೇರಿಗೆ ಭೇಟಿ ನೀಡಿದ ಶಾಸಕರು ಮತ್ತು ನಿಯೋಗದ ಮುಖಂಡರು, ಪ್ರಕರಣದ ಪ್ರಸಕ್ತ ತನಿಖಾ ಹಂತದ ಬಗ್ಗೆ ಸುದೀರ್ಘ ಮಾಹಿತಿ ಪಡೆದರು. ಸುಮಾರು 40 ನಿಮಿಷಗಳ ಕಾಲ ನಡೆದ ಈ ಭೇಟಿಯಲ್ಲಿ ಶಾಸಕ ಹರೀಶ್ ಪೂಂಜಾ ಅವರು ಪ್ರಕರಣದ ಸತ್ಯಾಸತ್ಯತೆ ಹೊರಬರಲು ಪೊಲೀಸ್ ಇಲಾಖೆಗೆ ಪೂರ್ಣ ಪ್ರಮಾಣದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಪ್ರಕರಣದ ಬಗ್ಗೆ ನಿಯೋಗಕ್ಕೆ ಮಾಹಿತಿ ನೀಡಿದ ಜಿಲ್ಲಾ ಎಸ್‌ಪಿಯವರು, “ಇದು ಕೊಲೆಯೋ ಅಥವಾ ಆಕಸ್ಮಿಕವಾಗಿ ಸಂಭವಿಸಿದ ಸಾವೋ ಎಂಬ ನಿಖರ ಕಾರಣವನ್ನು ಪತ್ತೆಹಚ್ಚಲು ಇಲಾಖೆ ತೀವ್ರ ತನಿಖೆ ನಡೆಸುತ್ತಿದ್ದು, ತನಿಖೆಯು ಸದ್ಯ ಅಂತಿಮ ಹಂತದಲ್ಲಿದೆ” ಎಂದು ತಿಳಿಸಿದರು. ತನಿಖೆ ಸುಗಮವಾಗಿ ಸಾಗಲು ಎಲ್ಲರ ಸಹಕಾರ ಅಗತ್ಯ ಎಂದು ಅವರು ಈ ಸಂದರ್ಭದಲ್ಲಿ ವಿನಂತಿಸಿದರು.
ಶಾಸಕರ ಸಮಕ್ಷಮದಲ್ಲಿ ಸಂಘ-ಸಂಸ್ಥೆಗಳ ಪರವಾಗಿ ಎಸ್‌ಪಿಯವರಿಗೆ ಅಧಿಕೃತ ವಿನಂತಿ ಪತ್ರವನ್ನು ಸಲ್ಲಿಸಲಾಯಿತು. ಬಾಲಕನ ಸಾವಿನ ರಹಸ್ಯವನ್ನು ಶೀಘ್ರವಾಗಿ ಭೇದಿಸಿ, ಅಪರಾಧಿಗಳನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದನ್ನೂ ಓದಿ:Cricket: ಆರ್ಚರ್ ಕುತ್ತಿಗೆಯಲ್ಲಿ ಕಾಣಿಸದ ಚಿನ್ನದ ಸರ: ಎಲ್ಲರ ಕಣ್ಣು ಪಾಕ್ ಆಟಗಾರರ ಮೇಲೆ!
ಈ ನಿಯೋಗದಲ್ಲಿ ಪುತ್ತೂರು ಬಿ.ಜಿ.ಎಸ್.ಬಿ (BGSB) ಸಂಘದ ಉಪಾಧ್ಯಕ್ಷರಾದ ಬಾಲಕೃಷ್ಣ ನಾಯಕ್ ತೆಂಕಿಲ, ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ಪ್ರಭು ಕುಂಟುನಿ, ಹಿರಿಯ ನಿರ್ದೇಶಕರಾದ ರಾಧಾಕೃಷ್ಣ ಬೋರ್ಕರ್ ಹಾಗೂ ಹರಿಪ್ರಸಾದ್ ಎಮ್. ಉಪಸ್ಥಿತರಿದ್ದು ಮೃತ ಬಾಲಕನ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಧ್ವನಿಗೂಡಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


