ಹಾರೋಹಳ್ಳಿ: ಸರ್ಕಾರಿ ಆಸ್ಪತ್ರೆಯೊಂದರ ಶೌಚಾಲಯದೊಳಗೆ ರಹಸ್ಯವಾಗಿ ಕ್ಯಾಮೆರಾ ಇಟ್ಟು ಚಿಕಿತ್ಸೆಗೆ ಬರುತ್ತಿದ್ದ ಮಹಿಳೆಯರ ಖಾಸಗಿ ದೃಶ್ಯಗಳನ್ನು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಅತ್ಯಂತ ಆಘಾತಕಾರಿ ಘಟನೆ ತೋಕಸಂದ್ರ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಘಟನೆ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಸಾರ್ವಜನಿಕರು ಆರೋಪಿಗೆ ತಕ್ಕ ಶಾಸ್ತಿ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಅದೇ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಐದು ವರ್ಷಗಳಿಂದ ಹೊರಗುತ್ತಿಗೆ (Outsourcing) ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಶ್ರೀಧರ್ ಎಂಬಾತನೇ ಬಂಧಿತ ಕಾಮುಕ ಆರೋಪಿಯಾಗಿದ್ದಾನೆ.
ಮಹಿಳೆಯೊಬ್ಬರು ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತಮ್ಮ ಪತಿಯೊಂದಿಗೆ ಬಂದಿದ್ದರು. ಈ ವೇಳೆ ಮಹಿಳೆ ಆಸ್ಪತ್ರೆಯ ಶೌಚಾಲಯಕ್ಕೆ ಹೋದಾಗ, ಅಲ್ಲಿ ಅಡಗಿಸಿಟ್ಟಿದ್ದ ರಹಸ್ಯ ಕ್ಯಾಮೆರಾ ಅವರ ಕಣ್ಣಿಗೆ ಬಿದ್ದಿದೆ. ಇದನ್ನು ನೋಡಿ ತೀವ್ರ ಆಘಾತಕ್ಕೊಳಗಾದ ಮಹಿಳೆ ತಕ್ಷಣವೇ ಹೊರಗೆ ಬಂದು ಪತಿಯ ಬಳಿ ವಿಷಯ ತಿಳಿಸಿದ್ದಾರೆ. ಪತಿ ಶೌಚಾಲಯದ ಒಳಗೆ ಹೋಗಿ ಕೂಲಂಕಷವಾಗಿ ಪರಿಶೀಲಿಸಿದಾಗ ಅಲ್ಲಿ ರಹಸ್ಯವಾಗಿ ವಿಡಿಯೋ ರೆಕಾರ್ಡಿಂಗ್ ಜಾಲ ಇಟ್ಟಿರುವುದು ಸಂಪೂರ್ಣವಾಗಿ ಬಯಲಾಗಿದೆ.
ಆಸ್ಪತ್ರೆಯ ಸಿಬ್ಬಂದಿಯೇ ಈ ಕೃತ್ಯ ಎಸಗಿರುವುದು ದೃಢಪಡುತ್ತಿದ್ದಂತೆ, ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ರೋಗಿಗಳ ಸಂಬಂಧಿಕರು ನೌಕರ ಶ್ರೀಧರ್‌ನನ್ನು ಹಿಡಿದು ತೀವ್ರ ತರಾಟೆಗೆ ತೆಗೆದುಕೊಂಡು ಧರ್ಮದೇಟು ನೀಡಿದ್ದಾರೆ. ತದನಂತರ ಹಾರೋಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಮಹಿಳೆಯರ ಸುರಕ್ಷತೆಗೆ ಕಂಟಕವಾಗಿರುವ ಇಂತಹ ಕಾಮುಕನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


