ಬಂಟ್ವಾಳ: ಚಿಕ್ಕಮಗಳೂರಿನ ಜಯಪುರದಲ್ಲಿ ಈಜುಕೊಳದಲ್ಲಿ ಮುಳುಗಿ ಮೃತಪಟ್ಟಿದ್ದ ಬಂಟ್ವಾಳ ತಾಲೂಕಿನ ವಿಟ್ಲ ಕಾಶಿಮಠದ ನಿವಾಸಿ ಅನಿಕೇತ್ ಅಂತ್ಯಕ್ರಿಯೆ ಇಂದು ಬೆಳಗ್ಗೆ ವಿಟ್ಲದ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
ಜಯಪುರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಬೆಳಗ್ಗೆ 5 ಗಂಟೆಗೆ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. ಸುಮಾರು 8:30 ಕಾಶಿಮಠದಲ್ಲಿರುವ ನಿವಾಸಕ್ಕೆ ಮೃತದೇಹ ತಲುಪಿದ್ದು, 9.30ರ ವೇಳೆಗೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಸ್ನೇಹಬಳಗ, ಸಂಬಂಧಿಕರು, ಸ್ಥಳೀಯರು ಕಣ್ಣೀರ ವಿದಾಯ ಹೇಳಿದರು.

ಇದನ್ನೂ ಓದಿ: ಬಸ್ ನಿಲ್ದಾಣದಿಂದಲೇ ಅಪಹರಣ: ಬಲವಂತವಾಗಿ ಸೀರೆ, ನೈಟಿ ತೊಡಿಸಿ ಹಗಲು ದರೋಡೆಗೆ ಬಳಕೆ
ಏನಿದು ಪ್ರಕರಣ?

ಪುತ್ತೂರಿನ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ, ವಿಟ್ಲದಲ್ಲಿ ಜೀವವಿಮಾ ಕಚೇರಿ ಹೊಂದಿರುವ ಕಾಶಿಮಠದ ನಿವಾಸಿ ಗೋವರ್ದನ್ ನಾಯಕ್ ಅವರ ಪುತ್ರ ಅನಿಕೇತ್ ಚಿಕ್ಕಮಗಳೂರಿನ ಜಯಪುರದಲ್ಲಿರುವ ಗುರುಕುಲ ಮಾದರಿಯ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ 7 ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದನು. ಭಾನುವಾರ ಶಿಕ್ಷಕರು ಮತ್ತು ಸಹಪಾಠಿಗಳೊಂದಿಗೆ ಈಜಾಡಲು ಈಜುಕೊಳದ ಬಳಿ ತೆರಳಿದ್ದರು.
ಮಧ್ಯಾಹ್ನ 2ಗಂಟೆಯ ಸುಮಾರಿಗೆ ಅನಿಕೇತ್ ಈಜುಕೊಳಕ್ಕೆ ಹಾರಿದಾಗ ಭಯಗೊಂಡ ಪರಿಣಾಮ ಉಸಿರಾಡಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದನು.

ರಾಜ್ಯದ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

