ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಬಿರುಗಾಳಿ ಎಬ್ಬಿಸಿದ್ದ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಪ್ರಸಂಗಕ್ಕೆ ಕೊನೆಗೂ ಸುಖಾಂತ್ಯ ಸಿಕ್ಕಿದೆ. ಹೈಕಮಾಂಡ್ ಹಾಗೂ ರಾಜ್ಯ ನಾಯಕರ ಯಶಸ್ವಿ ಸಂಧಾನದ ಬಳಿಕ ರಾಮಲಿಂಗಾರೆಡ್ಡಿ ಅವರು ತಮ್ಮ ರಾಜೀನಾಮೆಯನ್ನು ಅಧಿಕೃತವಾಗಿ ವಾಪಸ್ ಪಡೆದಿದ್ದು, ಸಚಿವ ಸಂಪುಟದಲ್ಲಿ ಮುಂದುವರಿಯಲಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಅಧಿಕೃತ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರ್ಜೇವಾಲ, “ರಾಮಲಿಂಗಾರೆಡ್ಡಿ ಅವರು ವಿದ್ಯಾರ್ಥಿ ಸಂಘಟನೆ (NSUI) ದಿನಗಳಿಂದಲೂ ಪಕ್ಷಕ್ಕಾಗಿ ದುಡಿದವರು. 8 ಬಾರಿ ಶಾಸಕರಾಗಿ ಭಾರಿ ಮತಗಳ ಅಂತರದಿಂದ ಗೆದ್ದಿರುವ ಅವರು ಪಕ್ಷದ ಅಮೂಲ್ಯ ಆಸ್ತಿ. ಅವರ ಅಸಮಾಧಾನದ ಬೆನ್ನಲ್ಲೇ ನಾನು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಒಟ್ಟಾಗಿ ಕುಳಿತು ಸುದೀರ್ಘ ಚರ್ಚೆ ನಡೆಸಿದೆವು. ಪಕ್ಷದ ಹಿತದೃಷ್ಟಿಯಿಂದ ರಾಜೀನಾಮೆ ವಾಪಸ್ ಪಡೆಯುವಂತೆ ಕೋರಿದಾಗ, ಅವರು ನಮ್ಮ ಮನವಿಗೆ ಸ್ಪಂದಿಸಿ ಸಂಪುಟದಲ್ಲಿ ಮುಂದುವರಿಯಲು ಒಪ್ಪಿದ್ದಾರೆ” ಎಂದು ತಿಳಿಸಿದರು.
ಇದೇ ವೇಳೆ ಈ ಬಿಕ್ಕಟ್ಟನ್ನು ಇಟ್ಟುಕೊಂಡು ರಾಜಕೀಯ ಮಾಡಲು ಹೊರಟಿದ್ದ ಬಿಜೆಪಿ ವಿರುದ್ಧ ಸುರ್ಜೇವಾಲ ತೀವ್ರ ಆಕ್ರೋಶ ಹೊರಹಾಕಿದರು. “ರಾಮಲಿಂಗಾರೆಡ್ಡಿ ಅವರ ವೈಯಕ್ತಿಕ ನಿರ್ಧಾರವನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರಾಜ್ಯದಲ್ಲಿ ಇಲ್ಲದ ಗೊಂದಲ ಸೃಷ್ಟಿಸಲು ಯತ್ನಿಸಿದರು, ಸುಮ್ಮನೆ ಸಂಭ್ರಮ ಆಚರಿಸಿದರು. ಆದರೆ ಕಾಂಗ್ರೆಸ್ ಒಗ್ಗಟ್ಟಾಗಿದೆ ಎಂಬುದನ್ನು ಇವತ್ತು ಸಾಬೀತುಪಡಿಸಿದ್ದೇವೆ” ಎಂದರು.
ಇದನ್ನೂ ಓದಿ:ಹೈಕಮಾಂಡ್ ಭರವಸೆಗೆ ಮುನಿಯಪ್ಪ ‘ಐ ಆ್ಯಮ್ ಹ್ಯಾಪಿ’: ಕೊನೆಗೂ ತಣ್ಣಗಾಯ್ತು ಮುನಿಯಪ್ಪ ಖಾತೆ ಕ್ಯಾತೆ
ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಅವರು, “ಬಿಜೆಪಿಯವರು ಕೇವಲ ಟೀಕೆ ಮಾಡುವುದರಲ್ಲೇ ನಿರತರಾಗಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಕನ್ನಡಿಗರಿಗಾಗಿ ಗೃಹಲಕ್ಷ್ಮಿ, ಗೃಹಜ್ಯೋತಿ, 10 ಕೆ.ಜಿ ಅಕ್ಕಿಯ ಅನ್ನಭಾಗ್ಯ, ಯುವನಿಧಿ ಹಾಗೂ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ನೀಡಿದೆ. ಈ ಗ್ಯಾರೆಂಟಿಗಳೇ ನಮ್ಮ ಶ್ರೀರಕ್ಷೆ” ಎಂದು ಪ್ರತಿಪಾದಿಸಿದರು. ಸುದ್ದಿಗೋಷ್ಠಿಯಲ್ಲಿ ಕೇವಲ ರಾಜೀನಾಮೆ ಬಿಕ್ಕಟ್ಟು ಶಮನದ ಕುರಿತು ಮಾತ್ರ ಮಾಹಿತಿ ನೀಡಿದ ಸುರ್ಜೇವಾಲ, ಮಾಧ್ಯಮಗಳ ಇನ್ನುಳಿದ ಯಾವುದೇ ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸದೆ ಹೊರನಡೆದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


