ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಸಚಿವರ ಖಾತೆ ಹಂಚಿಕೆಯ ಬಿಕ್ಕಟ್ಟು ಕೊನೆಗೂ ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿವೆ. ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಕೈತಪ್ಪಿದ್ದಕ್ಕೆ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರು ಹಠಾತ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಆಹಾರ ಇಲಾಖೆ ಹಂಚಿಕೆ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದ ಹಿರಿಯ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಸಮಾಧಾನಪಡಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿದೆ. ಖುದ್ದು ರಾಹುಲ್ ಗಾಂಧಿ ಅವರೇ ಮುನಿಯಪ್ಪ ಅವರೊಂದಿಗೆ ಮಾತುಕತೆ ನಡೆಸಿ ಮಹತ್ವದ ಭರವಸೆ ನೀಡಿದ ಬಳಿಕ, ಮುನಿಯಪ್ಪ ಅವರು ನಾನು ಸಂತೋಷವಾಗಿದ್ದೇನೆ ಎಂದು ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಾಗಿ ಬೆಂಗಳೂರಿಗೆ ಆಗಮಿಸಿದ್ದ ರಾಹುಲ್ ಗಾಂಧಿ ಅವರ ಜೊತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವರ ಖಾತೆ ಅಸಮಾಧಾನದ ಕುರಿತು ಸುದೀರ್ಘ ಚರ್ಚೆ ನಡೆಸಿದರು. ರಾಮಲಿಂಗಾರೆಡ್ಡಿ ಅವರ ಹಠಾತ್ ರಾಜೀನಾಮೆ ನಿರ್ಧಾರ ಹಾಗೂ ಸಚಿವ ಸಂಪುಟದ ಮೇಲಾಗಿರುವ ಅದರ ಪರಿಣಾಮಗಳ ಬಗ್ಗೆ ರಾಹುಲ್ ಗಾಂಧಿ ಅವರ ಗಮನಕ್ಕೆ ತರಲಾಯಿತು. ಇದೇ ವೇಳೆ ಕೆ.ಎಚ್. ಮುನಿಯಪ್ಪ ಅವರ ತೀವ್ರ ಅಸಮಾಧಾನದ ಕುರಿತೂ ಗಂಭೀರ ಚರ್ಚೆ ನಡೆಯಿತು.
ಇದನ್ನೂ ಓದಿ:ಆಹಾರ ಖಾತೆ ಸಿಕ್ಕಿದ್ದಕ್ಕೆ ಬಹಿರಂಗ ಆಕ್ರೋಶ; ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೆ.ಎಚ್. ಮುನಿಯಪ್ಪ ಚಿಂತನೆ!
ಬಳಿಕ ಸಚಿವ ಕೆ.ಎಚ್. ಮುನಿಯಪ್ಪ ಅವರು ಖುದ್ದು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ, ಖಾತೆ ಹಂಚಿಕೆಯಲ್ಲಿ ತಮ್ಮ ಹಿರಿತನಕ್ಕೆ ಆಗಿರುವ ಅನ್ಯಾಯದ ಬಗ್ಗೆ ಅಳಲು ತೋಡಿಕೊಂಡರು. ಮುನಿಯಪ್ಪ ಅವರ ವಾದವನ್ನು ಆಲಿಸಿದ ರಾಹುಲ್ ಗಾಂಧಿ, ಸದ್ಯ ಉಂಟಾಗಿರುವ ಗೊಂದಲಗಳನ್ನು ಶೀಘ್ರದಲ್ಲೇ ಹೈಕಮಾಂಡ್ ಮಟ್ಟದಲ್ಲಿ ಚರ್ಚಿಸಿ ಸೂಕ್ತವಾಗಿ ಸರಿಪಡಿಸಿಕೊಡುವುದಾಗಿ ದೃಢ ಭರವಸೆ ನೀಡಿದರು ಎನ್ನಲಾಗಿದೆ. ನಾಯಕರ ಈ ಭರವಸೆಯಿಂದ ಸಂಪೂರ್ಣ ಸಮಾಧಾನಗೊಂಡಿರುವ ಮುನಿಯಪ್ಪ, ತಮ್ಮ ಬಂಡಾಯದ ನಿಲುವಿನಿಂದ ಹಿಂದೆ ಸರಿದಿದ್ದು, ಸದ್ಯಕ್ಕೆ ಹ್ಯಾಪಿ ಎಂದು ಹೇಳುವ ಮೂಲಕ ಸಿಎಂ ಹಾಗೂ ಡಿಸಿಎಂ ನಿರಾಳವಾಗುವಂತೆ ಮಾಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


