ದೆಹಲಿ: ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ ಬೆನ್ನಲ್ಲೇ, ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ದೆಹಲಿಗೆ ಹೊರಟಿದ್ದ ಸಿದ್ದರಾಮಯ್ಯ ಹಾಗೂ ರಾಜ್ಯದ ಹಿರಿಯ ಸಚಿವರನ್ನೊಳಗೊಂಡ ನಿಯೋಗಕ್ಕೆ ಹವಾಮಾನ ವೈಪರೀತ್ಯದ ಶಾಕ್ ಎದುರಾಗಿದೆ. ದೆಹಲಿಯಲ್ಲಿ ದಿಢೀರ್ ಆಗಿ ಭಾರಿ ಗಾಳಿ ಮಳೆ ಮತ್ತು ಚಂಡಮಾರುತದ ವಾತಾವರಣ ಉಂಟಾದ ಕಾರಣ, ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ವಿಶೇಷ ಚಾರ್ಟರ್ಡ್ ವಿಮಾನವನ್ನು (Chartered Flight) ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬದಲಿಗೆ ರಾಜಸ್ಥಾನದ ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾರ್ಗ ಬದಲಾಯಿಸಿ ಅಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ.
ದೆಹಲಿ ಮತ್ತು ಅದರ ಸುತ್ತಮುತ್ತಲಿನ ಎನ್‌ಸಿಆರ್ (NCR) ವ್ಯಾಪ್ತಿಯಲ್ಲಿ ಗಂಟೆಗೆ 60 ರಿಂದ 80 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು, ಭಾರಿ ಗುಡುಗು ಸಹಿತ ಮುಸಲಧಾರೆ ಮಳೆ ಸುರಿಯುತ್ತಿದೆ. ಇದರಿಂದಾಗಿ ವಿಮಾನಗಳ ಸಂಚಾರ ಹಾಗೂ ಲ್ಯಾಂಡಿಂಗ್‌ಗೆ ತೀವ್ರ ದೃಶ್ಯ ಗೋಚರತೆ ಕೊರತೆ (Reduced Visibility) ಉಂಟಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಏರ್ ಟ್ರಾಫಿಕ್ ಕಂಟ್ರೋಲ್ (ATC) ನೀಡಿದ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ಪೈಲಟ್‌ಗಳು ಸಿಎಂ ಇದ್ದ ವಿಮಾನದ ಹಾರಾಟದ ಮಾರ್ಗವನ್ನು ಜೈಪುರದತ್ತ ತಿರುಗಿಸಿದರು. ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷ ಅಥವಾ ಭದ್ರತಾ ಸಮಸ್ಯೆಗಳು ಎದುರಾಗಿಲ್ಲ ಮತ್ತು ಸಿದ್ದರಾಮಯ್ಯ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಗಣ್ಯರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಈ ವಿಶೇಷ ವಿಮಾನದಲ್ಲಿ ಸಿದ್ದರಾಮಯ್ಯ ಅವರೊಂದಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಸಚಿವರಾದ ಕೆ.ಜೆ. ಜಾರ್ಜ್, ಭೈರತಿ ಸುರೇಶ್, ಶಾಸಕ ಹಾಗೂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ಸೇರಿದಂತೆ ಪ್ರಮುಖ ನಾಯಕರು ಪ್ರಯಾಣಿಸುತ್ತಿದ್ದರು.
ಇದನ್ನೂ ಓದಿ: ‘ಮಾತಾಡಿದ್ರೆ ಮುತ್ತು ಒಡೆದು ಹೋಗತ್ತೆ, ಸದ್ಯದಲ್ಲೇ ಡಿಕೆ ಶಿವಕುಮಾರ್ಗೆ ಸಾಡೇ ಸಾತಿ ಶನಿ ಕಾಟ!’
ದೆಹಲಿಯಲ್ಲಿ ಹವಾಮಾನ ಪರಿಸ್ಥಿತಿ ಸುಧಾರಿಸಿ, ಎಟಿಸಿಯಿಂದ ಗ್ರೀನ್ ಸಿಗ್ನಲ್ ದೊರೆತ ನಂತರವೇ ಜೈಪುರದಿಂದ ದೆಹಲಿಗೆ ವಿಮಾನವು ಮರಳಿ ಪ್ರಯಾಣ ಬೆಳೆಸಲು ಸಾಧ್ಯವಾಗಲಿದ್ದು, ಇದಕ್ಕೆ ಕನಿಷ್ಠ ಇನ್ನೂ ಒಂದು ಗಂಟೆಗೂ ಅಧಿಕ ಸಮಯ ಬೇಕಾಗಬಹುದು ಎಂದು ವಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


