ಧಾರವಾಡ: ಸೇವೆಯಿಂದ ಅಮಾನತುಗೊಂಡಿದ್ದ ಧಾರವಾಡ ಕೇಂದ್ರ ಕಾರಾಗೃಹದ ಜೈಲರ್ ಸಿದ್ಧರಾಮಪ್ಪ ವಡ್ಡರ್ (37) ಅವರು ಶುಕ್ರವಾರ ಕಾರಾಗೃಹದ ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಮೃತರ ಪತ್ನಿ ಲಕ್ಷ್ಮಿ ಅವರು, ತಮ್ಮ ಪತಿಯ ಸಾವಿಗೆ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರ ಮಾನಸಿಕ ಕಿರುಕುಳವೇ ನೇರ ಕಾರಣ ಎಂದು ಗಂಭೀರ ಆರೋಪ ಮಾಡಿರುವುದು ಇಲಾಖೆಯಲ್ಲಿ ತಲ್ಲಣ ಸೃಷ್ಟಿಸಿದೆ.
ಧಾರವಾಡದ ಹೊಸ ಬಸ್ ನಿಲ್ದಾಣದ ಬಳಿ ಇರುವ ಕಾರಾಗೃಹದ ವಸತಿ ಗೃಹದಲ್ಲಿ ಈ ಘಟನೆ ನಡೆದಿದೆ. ಕಳೆದ ಎರಡು ತಿಂಗಳ ಹಿಂದೆ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸಿದ್ಧರಾಮಪ್ಪ ಅವರನ್ನು ಅಮಾನತು (Suspension) ಮಾಡಲಾಗಿತ್ತು. ತದನಂತರ ಅವರನ್ನು ಮೈಸೂರು ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಸಿದ್ಧರಾಮಪ್ಪ ಅವರು ಇನ್ನು ಮೈಸೂರಿಗೆ ಹೋಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರಲಿಲ್ಲ. ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ನೋಡಿ ಸಿದ್ಧರಾಮಪ್ಪ ಅವರು ನೇಣಿಗೆ ಶರಣಾಗಿದ್ದಾರೆ.
ಇದನ್ನೂ ಓದಿ: ಮುಂಬೈ ಏರ್ಪೋರ್ಟ್ನಲ್ಲಿ 11 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಸಹಿತ ಸಿಕ್ಕಿಬಿದ್ದ ಮಾಜಿ ‘ಮಿಸಸ್ ಕೇರಳ’
ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಕಣ್ಣೀರಿಟ್ಟ ಜೈಲರ್ ಪತ್ನಿ ಲಕ್ಷ್ಮಿ, “ನನ್ನ ಪತಿಯ ಸಾವಿಗೆ ಡಿಜಿಪಿ ಅಲೋಕ್ ಕುಮಾರ್ ಅವರೇ ಕಾರಣ. ಅಲೋಕ್ ಕುಮಾರ್ ಸರ್ ಅವರೇ ನನ್ನ ಗಂಡನ ಜೀವ ಪಡೆದಿದ್ದಾರೆ” ಎಂದು ಆಕ್ರೋಶ ಹೊರಹಾಕಿದ್ದಾರೆ. “ನನ್ನ ಪತಿಯನ್ನು ಸಸ್ಪೆಂಡ್ ಮಾಡಿದ್ದಾರೆ, ಮುಂದಕ್ಕೆ ಜೈಲಿಗೆ ಹಾಕ್ತಾರೆ ಅನ್ನೋ ತೀವ್ರ ಭಯದಲ್ಲೇ ಅವರು ದಿನ ಕಳೆಯುತ್ತಿದ್ದರು. ಮೈಸೂರಿಗೆ ಕರ್ತವ್ಯಕ್ಕೆ ಹಾಜರಾಗಲು ಹೊರಡುವ ಮುನ್ನ, ತಂದೆ-ತಾಯಿ ಮುಖ ನೋಡಿ ಹೋಗ್ತಿನಿ ಅಂತ ಹೇಳಿದ್ದರು. ಆದರೆ ತಮ್ಮ ಮೇಲೆ ಇಲಾಖೆ ಇನ್ನೂ ದೊಡ್ಡ ಕ್ರಮ ಕೈಗೊಳ್ಳಬಹುದು ಎಂಬ ಆತಂಕ ಅವರಿಗೆ ಕಾಡುತ್ತಿತ್ತು. ಯಾವಾಗಲೂ ‘ನನ್ನನ್ನು ಅಲೋಕ್ ಕುಮಾರ್ ಜೈಲಿಗೆ ಕಳಿಸ್ತಾರೆ’ ಎಂದು ಹೆದರುತ್ತಿದ್ದರು. ಇದೇ ಭಯದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಲಕ್ಷ್ಮಿ ಗಂಭೀರವಾಗಿ ಆರೋಪಿಸಿದ್ದಾರೆ. ಸದ್ಯ ಈ ಪ್ರಕರಣದ ಕುರಿತು ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


