ವಿಜಯಪುರ: ಜಿಲ್ಲೆಯ ಚಡಚಣ ತಾಲ್ಲೂಕಿನ ಹಾವಿನಾಲ್ ಗ್ರಾಮದಲ್ಲಿರುವ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಸಂಜೆ ಭಾರಿ ಬೆಂಕಿ ಕಾಣಿಸಿಕೊಂಡಿದೆ.
ಕಾರ್ಖಾನೆಯಲ್ಲಿ ಶೇಖರಿಸಿಟ್ಟಿದ್ದ ಅಪಾರ ಪ್ರಮಾಣದ ಬಗ್ಯಾಸ್ (ಕಬ್ಬಿನ ಸಿಪ್ಪೆ)ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಬೆಂಕಿ ತನ್ನ ಕೆನ್ನಾಲಿಗೆಯಿಂದ ಕ್ಷಣಾರ್ಧದಲ್ಲಿ ಬಾಯರ್ ಗೂ ಕೂಡ ಆವರಿಸಿದೆ.

ಇದನ್ನೂ ಓದಿ: ಜೇನುನೊಣಗಳ ದಾಳಿಯಿಂದ ತನ್ನ ಪ್ರಾಣ ಒತ್ತೆ ಇಟ್ಟು ಮಕ್ಕಳ ರಕ್ಷಿಸಿದ ಅಂಗನವಾಡಿ ಸಹಾಯಕಿ
ಆದರೆ, ಎರಡು ದಿನಗಳ ಹಿಂದೆಯಷ್ಟೇ ಕಬ್ಬು ನುರಿಸಲು ಸಾಗಿಸುವ ಬೆಲ್ಟ್ ತುಂಡಾಗಿದ್ದರಿಂದ ಕಾರ್ಖಾನೆಯ ಎಲ್ಲ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದ್ದರಿಂದ ಕಾರ್ಖಾನೆಯಲ್ಲಿ ಹೆಚ್ಚು ಕಾರ್ಮಿಕರಿಲ್ಲದ್ದರಿಂದ ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ, ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಕಾರ್ಖಾನೆಯಲ್ಲಿನ ಅಗ್ನಿ ನಂದಿಸಲು ಇಂಡಿ ಹಾಗೂ ವಿಜಯಪುರದಿಂದ 4 ಅಗ್ನಿಶಾಮಕ ವಾಹನಗಳು ಹಾಗೂ ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಸದ್ಯ ಬೆಂಕಿ ಹತೋಟಿಗೆ ಬಂದಿದೆ. ಮುಂಜಾಗೃತಾ ಕ್ರಮವಾಗಿ ಚಡಚಣ ಪೊಲೀಸ್ ಠಾಣಾ ಸಿಬ್ಬಂದಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಸಂಪೂರ್ಣ ತನಿಖೆಯ ನಂತರ ಹಾನಿಯ ನಿಖರ ಮಾಹಿತಿ ಹಾಗೂ ಅಗ್ನಿ ಅವಘಡಕ್ಕೆ ಕಾರಣ ತಿಳಿದು ಬರಲಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

