ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹಬ್ಬದ ಸಡಗರದ ನಡುವೆಯೇ ಪ್ರಮುಖ ರಾಜಕೀಯ ಸಂಚಲನ ಉಂಟಾಗಿದೆ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಮಾಜಿ ಶಾಸಕ ನೆ.ಲ. ನರೇಂದ್ರ ಬಾಬು ಅವರು ಭಾರತೀಯ ಜನತಾ ಪಾರ್ಟಿಯ (BJP) ಪ್ರಾಥಮಿಕ ಸದಸ್ಯತ್ವಕ್ಕೆ ದಿಢೀರ್ ರಾಜೀನಾಮೆ ನೀಡಿದ್ದು, ಭಾನುವಾರ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು. “ಬಿಜೆಪಿ ಈಗ ತಂದೆ ಮಕ್ಕಳ ಪಕ್ಷವಾಗಿದೆ. ಅಲ್ಲಿ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ (OBC) ನಾಯಕರಿಗೆ ಯಾವುದೇ ನೆಲೆ ಇಲ್ಲದಂತಾಗಿದೆ. ಹೀಗಾಗಿ ನಾನು ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದೇನೆ. ದಿನಾಂಕ ಸೆಪ್ಟೆಂಬರ್ 13ರ ಭಾನುವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಸಮ್ಮುಖದಲ್ಲಿ ಮಾತೃಪಕ್ಷವಾದ ಕಾಂಗ್ರೆಸ್‌ಗೆ ವಾಪಸ್ ಸೇರ್ಪಡೆಯಾಗಲಿದ್ದೇನೆ,” ಎಂದು ಅವರು ಸ್ಪಷ್ಟಪಡಿಸಿದರು.
ತಮ್ಮ ರಾಜಕೀಯ ರಂಗದ ಅನುಭವ ಹಾಗೂ ಅನುಭವಿಸಿದ ಅನ್ಯಾಯವನ್ನು ಹಂಚಿಕೊಂಡ ನರೇಂದ್ರ ಬಾಬು, ಬಿಬಿಎಂಪಿ (ಮಹಾನಗರ ಪಾಲಿಕೆ) ಸದಸ್ಯನಾಗಿ 3 ಬಾರಿ ಹಾಗೂ ಶಾಸಕನಾಗಿ 2 ಬಾರಿ ಸಾರ್ವಜನಿಕ ಸೇವೆ ಸಲ್ಲಿಸಿದ್ದೇನೆ. ಕಳೆದ 10 ವರ್ಷಗಳಿಂದ ಬಿಜೆಪಿಯಲ್ಲಿ ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೆ. ರಾಜಾಜಿನಗರ ಕ್ಷೇತ್ರದ ಶಾಸಕ ಎಸ್. ಸುರೇಶ್ ಕುಮಾರ್ ಹಾಗೂ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕ ಕೆ. ಗೋಪಾಲಯ್ಯ ಅವರ ಪರವಾಗಿ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೂ, ನನ್ನ ವಿರುದ್ಧ ಪಿತೂರಿ ನಡೆಸಿದವರ ಮೇಲೆ ಪಕ್ಷದ ಮುಖಂಡರು ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ: ಆರ್‌ಎಸ್‌ಎಸ್ ವರ್ಸಸ್ ಕರ್ನಾಟಕ ಸರ್ಕಾರ: ಪಥಸಂಚಲನಕ್ಕೆ ಅನುಮತಿ ಕಡ್ಡಾಯ ಎಂದ ಗೃಹ ಸಚಿವ
ಕೆ. ಗೋಪಾಲಯ್ಯ ಸೇರಿದಂತೆ 17 ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದಾಗ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರಲು ಉಪಚುನಾವಣೆಯಲ್ಲಿ ಸಹಕರಿಸುವಂತೆ ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ನನ್ನ ಮನವೊಲಿಸಿದ್ದರು. ಪಕ್ಷದ ಹಿತದೃಷ್ಟಿಯಿಂದ ತ್ಯಾಗ ಮಾಡಿದ ನನಗೆ ಜವಾಬ್ದಾರಿ ನೀಡುವ ವಿಚಾರದಲ್ಲಿ ಬಿಜೆಪಿ ನಾಯಕರು ಜಾಣ ಕುರುಡು ಪ್ರದರ್ಶಿಸಿದರು. ಕಷ್ಟಪಟ್ಟು ಕೆಲಸ ಮಾಡುವವರಿಗೆ ಬಿಜೆಪಿ ಪಕ್ಷದಲ್ಲಿ ಬೆಲೆಯೇ ಇಲ್ಲ ಎಂದು ಕಟುವಾಗಿ ವಾಗ್ದಾಳಿ ನಡೆಸಿದರು. ಕಳೆದ ಹಲವು ವರ್ಷಗಳಿಂದ ಮಹಾಲಕ್ಷ್ಮಿ ಲೇಔಟ್ ಹಾಗೂ ರಾಜಾಜಿನಗರ ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ತಮ್ಮಿಂದ ದೂರ ಮಾಡಲು ಯತ್ನಿಸಲಾಯಿತು ಎಂಬ ಬೇಸರದಿಂದಲೇ ನರೇಂದ್ರ ಬಾಬು ಅವರು ಹಳೆ ಗೂಡಿಗೆ ಮರಳಲು ತೀರ್ಮಾನಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

