ಬೆಂಗಳೂರು : ಹೃದಯಾಘಾತದ (Heart Attack) ನಂತರ ಎದೆನೋವು ಕಡಿಮೆಯಾಗಿ, ಸಂಪೂರ್ಣವಾಗಿ ಚೇತರಿಸಿಕೊಂಡಂತೆ ಅನಿಸಿದರೆ ‘ಅಪಾಯವೆಲ್ಲಾ ದಾಟಿದೆ’ ಎಂದುಕೊಳ್ಳುವುದು ನಿಮ್ಮ ತಪ್ಪೂಹೆಯಾಗಬಹುದು! ಅಚ್ಚರಿಯೆಂದರೆ, ಯಾವುದೇ ರೋಗಲಕ್ಷಣಗಳು ಕಾಣಿಸದಿದ್ದರೂ ಅಥವಾ ನೀವು ಸಂಪೂರ್ಣ ಆರೋಗ್ಯವಾಗಿದ್ದೀರಿ ಎಂದು ಭಾವಿಸಿದರೂ, ನಿಮ್ಮ ರಕ್ತನಾಳಗಳಲ್ಲಿ (Heart Arteries) ಗಂಭೀರವಾದ ಬ್ಲಾಕೇಜ್ಗಳು (Blockages) ಹಾಗೆಯೇ ಉಳಿದಿರುವ ಸಾಧ್ಯತೆ ದಟ್ಟವಾಗಿರುತ್ತದೆ.
ಈ ವಿಷಯದ ಕುರಿತು ಐಎಸ್ಐಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಅಸೀಮ್ ಧಾಲ್ ಅವರು ನೀಡಿದ ಪ್ರಮುಖ ವೈದ್ಯಕೀಯ ಮಾಹಿತಿ ಮತ್ತು ಮುನ್ನೆಚ್ಚರಿಕೆಗಳ ವರದಿ ಇಲ್ಲಿದೆ:
ಯಾವುದೇ ಲಕ್ಷಣಗಳಿಲ್ಲದಿದ್ದರೂ ಬ್ಲಾಕೇಜ್ ಇರಲು ಕಾರಣವೇನು?:
ಹೃದಯದ ಭಾಗಕ್ಕೆ ರಕ್ತ ಸಂಚಾರ ತಡೆಯುಂಟಾದಾಗ ಹೃದಯಾಘಾತ ಸಂಭವಿಸುತ್ತದೆ. ಪ್ರಾಥಮಿಕ ಚಿಕಿತ್ಸೆ ಅಥವಾ ತುರ್ತು ಘಟನೆಯ ನಂತರ ಎದೆನೋವು ತಾತ್ಕಾಲಿಕವಾಗಿ ಕಡಿಮೆಯಾಗಬಹುದು. ಆದರೆ, ರಕ್ತನಾಳದೊಳಗಿನ ಕಿರಿದಾದ ಹಾದಿ ಅಥವಾ ಬ್ಲಾಕೇಜ್ ತಾನಾಗಿಯೇ ಮಾಯವಾಗುವುದಿಲ್ಲ.
ರಕ್ತ ಹೆಪ್ಪುಗಟ್ಟುವಿಕೆ (Clot) ಸ್ವಲ್ಪ ಸಡಿಲಗೊಂಡಾಗ ರಕ್ತ ಸಂಚಾರ ತಾತ್ಕಾಲಿಕವಾಗಿ ಸುಧಾರಿಸಿ, ವ್ಯಕ್ತಿಗೆ ಆರಾಮವೆನಿಸಬಹುದು.
ಆದರೆ, ಒಂದಕ್ಕಿಂತ ಹೆಚ್ಚು ರಕ್ತನಾಳಗಳಲ್ಲಿ ತೀವ್ರ ಸ್ವರೂಪದ ಬ್ಲಾಕೇಜ್ಗಳಿದ್ದರೂ ಆರಂಭದಲ್ಲಿ ಯಾವುದೇ ಹೊರಲಕ್ಷಣಗಳು ಕಾಣಿಸದಿರಬಹುದು.
ಆದ್ದರಿಂದ, “ನನಗೆ ಆರಾಮವಾಗಿದೆ” ಎಂಬ ಭಾವನೆಯೊಂದೇ ನಿಮ್ಮ ಹೃದಯ ಸುರಕ್ಷಿತವಾಗಿದೆ ಎಂಬುದಕ್ಕೆ ಮಾನದಂಡವಲ್ಲ.
ವೈದ್ಯರು ಬ್ಲಾಕೇಜ್ ಅನ್ನು ಹೇಗೆ ಪತ್ತೆ ಹಚ್ಚುತ್ತಾರೆ?:
ರೋಗಲಕ್ಷಣಗಳು ಇಲ್ಲದಿದ್ದರೂ, ಹೃದಯಾಘಾತದ ನಂತರ ಕಡ್ಡಾಯವಾಗಿ ಫಾಲೋ-ಅಪ್ ಪರೀಕ್ಷೆಗಳನ್ನು (Follow-up Tests) ಮಾಡಿಸಿಕೊಳ್ಳುವುದು ಅಗತ್ಯ. ವೈದ್ಯರು ಈ ಕೆಳಗಿನ ಪರೀಕ್ಷೆಗಳ ಮೂಲಕ ರಕ್ತನಾಳಗಳ ನಿಖರ ಸ್ಥಿತಿಯನ್ನು ತಿಳಿಯುತ್ತಾರೆ.
ಇಸಿಜಿ (ECG) ಮತ್ತು ರಕ್ತ ಪರೀಕ್ಷೆಗಳು
ಎಕೋಕಾರ್ಡಿಯೋಗ್ರಾಮ್
ಸ್ಟ್ರೆಸ್ ಟೆಸ್ಟ್
ಕೊರೊನರಿ ಆಂಜಿಯೋಗ್ರಾಮ್
ಈ ಪರೀಕ್ಷೆಗಳ ವರದಿ ಆಧರಿಸಿ, ಕೇವಲ ಮಾತ್ರೆಗಳು ಸಾಕೇ ಅಥವಾ ಆಂಜಿಯೋಪ್ಲಾಸ್ಟಿ (Angioplasty) ಯಂತಹ ಶಸ್ತ್ರಚಿಕಿತ್ಸೆಯ ಅಗತ್ಯವಿದೆಯೇ ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ.
ಇದನ್ನೂ ಓದಿ: ವೈದ್ಯಕೀಯ ನೊಬೆಲ್ ಪ್ರಶಸ್ತಿ ಪ್ರಕಟ: ಮೆದುಳಿನ ನರಕೋಶಗಳ ರಹಸ್ಯ ಭೇದಿಸಿದ ಮೂವರು ವಿಜ್ಞಾನಿಗಳಿಗೆ ಮಹೋನ್ನತ ಗೌರವ
ಸೈಲೆಂಟ್ ಬ್ಲಾಕೇಜ್ ನಿರ್ಲಕ್ಷಿಸಿದರೆ ಎದುರಾಗುವ ಭೀಕರ ಅಪಾಯಗಳು:
ಬ್ಲಾಕೇಜ್ಗಳನ್ನು ಪತ್ತೆಹಚ್ಚದೆ ಅಥವಾ ನಿರ್ಲಕ್ಷಿಸಿದರೆ, ಹೃದಯಕ್ಕೆ ಆಮ್ಲಜನಕ ಮತ್ತು ರಕ್ತದ ಪೂರೈಕೆ ಕಡಿಮೆಯಾಗುತ್ತಲೇ ಇರುತ್ತದೆ. ಡಾ. ಅಸೀಮ್ ಧಾಲ್ ಅವರ ಪ್ರಕಾರ, ಇದನ್ನು ನಿರ್ಲಕ್ಷಿಸುವುದರಿಂದ:
ಮತ್ತೊಮ್ಮೆ ತೀವ್ರ ಹೃದಯಾಘಾತ ಸಂಭವಿಸಬಹುದು.
ಹಾರ್ಟ್ ಫೇಲ್ಯೂರ್ ಅಥವಾ ಹೃದಯದ ಕಾರ್ಯಕ್ಷಮತೆ ತೀವ್ರ ಕುಸಿಯಬಹುದು.
ಅನಿಯಮಿತ ಹೃದಯ ಬಡಿತ ಉಂಟಾಗಬಹುದು.
ಮುಂಬರುವ ದಿನಗಳಲ್ಲಿ ದಿಢೀರ್ ಹೃದಯಾಘಾತದಅಪಾಯ ಹೆಚ್ಚಿರುತ್ತದೆ.
ಹೃದಯಾಘಾತದ ನಂತರ ನೋವು ಶಮನವಾಗುವುದು ಸಮಾಧಾನಕರ ವಿಷಯವೇ ಆದರೂ, ವೈದ್ಯರ ಸಲಹೆಯಂತೆ ನಿಯಮಿತ ತಪಾಸಣೆ ಮತ್ತು ತಜ್ಞ ಹೃದ್ರೋಗ ತಜ್ಞರ (Cardiologist) ಮಾರ್ಗದರ್ಶನವನ್ನು ತಪ್ಪದೇ ಪಾಲಿಸಬೇಕು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

