ದೇಶೀಯ ಆದಾಯ ಕುಸಿತ, ಆಮದು ಜಿಎಸ್‌ಟಿ ಏರಿಕೆ; ಮೇ ತಿಂಗಳ ತೆರಿಗೆ ವರದಿ ಇಲ್ಲಿದೆ

india-gst-collection-may-2026

ದೇಶದ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವು 2026ರ ಮೇ ತಿಂಗಳಲ್ಲಿ ವಾರ್ಷಿಕ ಆಧಾರದ ಮೇಲೆ 3.2% ಏರಿಕೆ ಕಂಡು ₹1,94,184 ಕೋಟಿ ತಲುಪಿದೆ. ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಮರುಪಾವತಿಗಳನ್ನು (Refunds) ಪರಿಗಣಿಸಿದ ಬಳಿಕದ ನಿವ್ವಳ ಜಿಎಸ್‌ಟಿ ಆದಾಯ ₹1,66,904 ಕೋಟಿ ಆಗಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 3.3% ಬೆಳವಣಿಗೆ ದಾಖಲಿಸಿದೆ.

2025ರ ಮೇ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹ ₹1,88,172 ಕೋಟಿ ಆಗಿದ್ದರೆ, 2026ರ ಏಪ್ರಿಲ್‌ನಲ್ಲಿ ದಾಖಲೆ ಮಟ್ಟದ ₹2,42,702 ಕೋಟಿ ಸಂಗ್ರಹವಾಗಿತ್ತು. 2026ರ ಏಪ್ರಿಲ್-ಮೇ ಅವಧಿಯಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹ 6.2% ಏರಿಕೆ ಕಂಡು ₹4.37 ಲಕ್ಷ ಕೋಟಿ ತಲುಪಿದೆ.

ಮರುಪಾವತಿಗಳಲ್ಲೂ ಏರಿಕೆ

ಮೇ 2026ರಲ್ಲಿ ಒಟ್ಟು ₹27,281 ಕೋಟಿ ಮರುಪಾವತಿ ನೀಡಲಾಗಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2.6% ಹೆಚ್ಚಳವಾಗಿದೆ. ದೇಶೀಯ ಮರುಪಾವತಿಗಳು 4.3% ಇಳಿಕೆ ಕಂಡರೆ, ರಫ್ತು ಸಂಬಂಧಿತ ಮರುಪಾವತಿಗಳು 16.6% ಏರಿಕೆ ದಾಖಲಿಸಿವೆ.

ಇದನ್ನೂ ಓದಿ: ಗ್ರಾಹಕರಿಗೆ ನಿರಾಳ ತಂದ ವಾರದ ಆರಂಭ!: ಚಿನ್ನದ ಬೆಲೆಯಲ್ಲಿ ದಿಢೀರ್ ಇಳಿಕೆ; ಸ್ಥಿರತೆ ಕಾಯ್ದುಕೊಂಡ ಬೆಳ್ಳಿ ದರ!

ಆಮದು ಜಿಎಸ್‌ಟಿ ಆದಾಯದಲ್ಲಿ ಭರ್ಜರಿ ಬೆಳವಣಿಗೆ

ದೇಶೀಯ ಜಿಎಸ್‌ಟಿ ಆದಾಯವು 2.6% ಇಳಿದು ₹1.34 ಲಕ್ಷ ಕೋಟಿಗೆ ತಲುಪಿದೆ. ಆದರೆ ಆಮದುಗಳ ಮೇಲಿನ ಜಿಎಸ್‌ಟಿ ಸಂಗ್ರಹವು 19.1% ಏರಿಕೆ ಕಂಡು ₹59,654 ಕೋಟಿಗೆ ಏರಿಕೆಯಾಗಿದೆ. ನಿವ್ವಳ ದೇಶೀಯ ಜಿಎಸ್‌ಟಿ ಆದಾಯವೂ 2.3% ಕುಸಿದಿದ್ದು, ಆಮದುಗಳಿಂದ ಬಂದ ನಿವ್ವಳ ಜಿಎಸ್‌ಟಿ ಆದಾಯ 19.7% ಏರಿಕೆ ಕಂಡು ₹49,403 ಕೋಟಿ ತಲುಪಿದೆ.

ಕೆಪಿಎಂಜಿ (KPMG) ಸಂಸ್ಥೆಯ ಪರೋಕ್ಷ ತೆರಿಗೆ ವಿಭಾಗದ ಮುಖ್ಯಸ್ಥ ಹಾಗೂ ಪಾಲುದಾರ ಅಭಿಷೇಕ್ ಜೈನ್ ಮಾತನಾಡಿ, ಮೇ 2026ರ ಜಿಎಸ್‌ಟಿ ಅಂಕಿ-ಅಂಶಗಳು ದೇಶೀಯ ಹಾಗೂ ಜಾಗತಿಕ ಆರ್ಥಿಕ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದ್ದಾರೆ.

“ಆಮದು ಜಿಎಸ್‌ಟಿ ಆದಾಯದಲ್ಲಿ ಸುಮಾರು 20% ಬೆಳವಣಿಗೆ ದಾಖಲಾಗಿದ್ದು, ರೂಪಾಯಿ ಮೌಲ್ಯ ಕುಸಿತವೂ ಇದಕ್ಕೆ ಕಾರಣವಾಗಿರಬಹುದು. ದೇಶೀಯ ಸಂಗ್ರಹವು ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಮಧ್ಯಮ ಮಟ್ಟದ ಬೆಳವಣಿಗೆ ತೋರಿಸಿದೆ. ರಫ್ತು ಐಜಿಎಸ್‌ಟಿ ಮರುಪಾವತಿಗಳ ನಿರಂತರ ಏರಿಕೆ ರಫ್ತುದಾರರ ದ್ರವ್ಯತೆ ಹೆಚ್ಚಿಸಲು ಮತ್ತು ಭಾರತದ ಸರಬರಾಜು ಸರಪಳಿಯನ್ನು ಸ್ಪರ್ಧಾತ್ಮಕವಾಗಿಡಲು ಸಹಕಾರಿಯಾಗಿದೆ” ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ