Breaking News

ಪಾಕಿಸ್ತಾನದ ‘ಲಾಫೇರ್’ ಗೇಮ್‌ಪ್ಲಾನ್‌ಗೆ ಭಾರತದಿಂದ ಮಾಸ್ಟರ್ ಚೆಕ್

ಸಾಂಪ್ರದಾಯಿಕ ಯುದ್ಧಗಳಲ್ಲಿ ಭಾರತದ ಮಿಲಿಟರಿ ಶಕ್ತಿ ಮತ್ತು ಬಲವನ್ನು ಎದುರಿಸಲು ಸಾಧ್ಯವಾಗದ ಪಾಕಿಸ್ತಾನ, ದಶಕಗಳಿಂದ ಅಂತರರಾಷ್ಟ್ರೀಯ ವೇದಿಕೆಗಳು, ಕೌನ್ಸಿಲ್‌ಗಳು ಹಾಗೂ ಕಾನೂನು ಪ್ರಕ್ರಿಯೆಗಳನ್ನು ಬಳಸಿಕೊಂಡು ಭಾರತವನ್ನು ಜಾಗತಿಕವಾಗಿ ಕಟ್ಟಿಹಾಕಲು ಯತ್ನಿಸುತ್ತಿತ್ತು. ಆದರೆ, ಹೇಗ್ ನಲ್ಲಿರುವ ಮಧ್ಯಸ್ಥಿಕೆ ನ್ಯಾಯಾಲಯ ಇತ್ತೀಚೆಗೆ ಸಿಂಧೂ ನದಿ ನೀರು ಒಪ್ಪಂದಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪನ್ನು ಭಾರತ ಪೂರ್ಣವಾಗಿ ತಿರಸ್ಕರಿಸುವ ಮೂಲಕ ಪಾಕಿಸ್ತಾನದ ತಂತ್ರಕ್ಕೆ ಭಾರಿ ಮುಖಭಂಗ ಉಂಟುಮಾಡಿದೆ.

ಹೇಗ್ ನ್ಯಾಯಾಲಯವು ಸಿಂಧೂ ಒಪ್ಪಂದದ ಅಡಿಯಲ್ಲಿ ಭಾರತದ ಜಲವಿದ್ಯುತ್ ಯೋಜನೆಗಳಿಗೆ (ಕಿಷನ್‌ಗಂಗಾ ಮತ್ತು ರಟ್ಲೆ) ಕೆಲವು ನಿರ್ಬಂಧಗಳನ್ನು ಹೇರಲು ಯತ್ನಿಸಿದ್ದು, ಒಪ್ಪಂದವು ಇಂದಿಗೂ ಜಾರಿಯಲ್ಲಿದೆ ಎಂದು ಹೇಳಿದೆ. ಆದರೆ, ಈ ನ್ಯಾಯಾಲಯದ ರಚನೆ ಮತ್ತು ಅಧಿಕಾರ ವ್ಯಾಪ್ತಿಯೇ ಕಾನೂನುಬಾಹಿರ ಎಂದು ಭಾರತ ಮೊದಲಿನಿಂದಲೂ ವಾದಿಸಿದ್ದು, ಈ ಪ್ರಕ್ರಿಯೆಯಿಂದ ಸಂಪೂರ್ಣವಾಗಿ ದೂರವುಳಿದಿತ್ತು.

ಭಾರತ ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳಿಗೆ ಪ್ರತಿಯಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದೂರು ನೀಡಿ, ಯೋಜನೆಗಳು ವಿಳಂಬವಾಗುವಂತೆ ಮಾಡುವುದು ಮತ್ತು ಭಾರತದ ಮೇಲೆ ಆರ್ಥಿಕ ಹಾಗೂ ರಾಜತಾಂತ್ರಿಕ ಒತ್ತಡ ಹೇರುವುದು ಇಸ್ಲಾಮಾಬಾದ್‌ನ ಮುಖ್ಯ ಕಾರ್ಯತಂತ್ರವಾಗಿತ್ತು.2025ರ ಪಹಲ್ಗಾಮ್ ಉಗ್ರರ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ಭಾರತ ನಡೆಸಿದ ‘ಆಪರೇಷನ್ ಸಿಂಧೂರ್’ ನಂತರ, ನವದೆಹಲಿ ತನ್ನ ಪಾಕಿಸ್ತಾನ ನೀತಿಯಲ್ಲಿ ಗಂಭೀರ ಬದಲಾವಣೆ ತಂದಿದೆ.

ಪಾಕಿಸ್ತಾನವು ಗಡಿಸಾಚೆಯ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೆ ‘ಸಿಂಧೂ ನದಿ ನೀರು ಒಪ್ಪಂದ’ವನ್ನು ಅಮಾನತಿನಲ್ಲಿ ಇಡಲಾಗುವುದು ಎಂದು ಭಾರತ ಈಗಾಗಲೇ ಸ್ಪಷ್ಟಪಡಿಸಿದೆ. ಭಾರತ ಭಾಗವಹಿಸದೇ ಇರುವ ಮತ್ತು ಅಕ್ರಮವಾಗಿ ರಚಿಸಲಾದ ಯಾವುದೇ ಅಂತರರಾಷ್ಟ್ರೀಯ ಪೀಠದ ಆದೇಶಗಳನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಭಾರತ ಖಡಕ್ಕಾಗಿ ತಿಳಿಸಿದೆ.

ಇದನ್ನೂ ಓದಿ: ನೇಪಾಳ ದುರಂತಕ್ಕೂ ಮುನ್ನ ಸಿಕ್ಕಿತ್ತಾ ದೈವಿಕ ಮುನ್ಸೂಚನೆ? ಪಲಾಂಚೋಕ್ ಭಗವತಿ ವಿಗ್ರಹ ಬೆವತ 2 ದಿನದಲ್ಲೇ ಪ್ರಳಯ

ಒಂದೆಡೆ ಭೀಕರ ಭಯೋತ್ಪಾದನೆಯನ್ನು ಪೋಷಿಸುತ್ತಾ, ಮತ್ತೊಂದೆಡೆ ದ್ವಿಪಕ್ಷೀಯ ಒಪ್ಪಂದಗಳ ಲಾಭ ಪಡೆಯಲು ಪಾಕಿಸ್ತಾನಕ್ಕೆ ಇನ್ಮುಂದೆ ಅವಕಾಶವಿಲ್ಲ ಎಂದು ಭಾರತ ಸಾರಿದೆ.ಪಾಕಿಸ್ತಾನವು ದಶಕಗಳಿಂದ ಅಂತರರಾಷ್ಟ್ರೀಯ ವೇದಿಕೆಗಳನ್ನು ಭಾರತದ ವಿರುದ್ಧ ಆಯುಧವಾಗಿ ಬಳಸಿಕೊಳ್ಳುತ್ತಿತ್ತು. ಆದರೆ, ಪಾಕಿಸ್ತಾನವೇ ಆಯ್ಕೆ ಮಾಡುವ ಪ್ರಕ್ರಿಯೆ ಅಥವಾ ನ್ಯಾಯಪೀಠಗಳಿಗೆ ಭಾರತ ಯಾವುದೇ ಮಾನ್ಯತೆ ನೀಡದಿರಲು ನಿರ್ಧರಿಸಿರುವುದು ಪಾಕಿಸ್ತಾನದ ‘ಲಾಫೇರ್’ ತಂತ್ರದ ಬೆನ್ನೆಲುಬನ್ನೇ ಮುರಿದಿದೆ. ಹೇಗ್ ನ್ಯಾಯಾಲಯದ ತೀರ್ಪು ಪಾಕಿಸ್ತಾನಕ್ಕೆ ಮಾಧ್ಯಮ ಹೇಳಿಕೆಗಳಿಗೆ ಸೀಮಿತವಾಗಬಹುದೇ ಹೊರತು, ಭಾರತದ ಸಾರ್ವಭೌಮ ನಿರ್ಧಾರಗಳು ಹಾಗೂ ನದಿ ನೀರು ಯೋಜನೆಗಳ ಅನುಷ್ಠಾನವನ್ನು ತಡೆಯಲು ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *