ದೆಹಲಿ: ಭಾರತೀಯ ಕ್ರೀಡಾಲೋಕಕ್ಕೆ ಅಪಾರ ಕೊಡುಗೆ ನೀಡಿದ ಶ್ರೇಷ್ಠ ಶೂಟರ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಹೈ-ಪರ್ಫಾರ್ಮೆನ್ಸ್ ತರಬೇತುದಾರ ಜಸ್ಪಾಲ್ ರಾಣಾ (49) ಅವರು ಜೂನ್ 12ರ ಶುಕ್ರವಾರದಂದು ನವದೆಹಲಿಯಲ್ಲಿ ಕೊನೆಯುಸುರೆಳೆದಿದ್ದಾರೆ. ಮ್ಯೂನಿಚ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ (ISSF) ವಿಶ್ವಕಪ್ ಮುಗಿಸಿ ಭಾರತಕ್ಕೆ ಮರಳುವಾಗ ವಿಮಾನದಲ್ಲೇ ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ದೆಹಲಿಯ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿ ಸ್ಟೆಂಟ್ ಅಳವಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ಭಾರತೀಯ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ (NRAI) ಧೃಢಪಡಿಸಿದೆ. ಅವರ ಈ ಹಠಾತ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
1990ರ ದಶಕದಲ್ಲಿ ಶೂಟಿಂಗ್ ಲೋಕಕ್ಕೆ ಪಾದಾರ್ಪಣೆ ಮಾಡಿದ ಜಸ್ಪಾಲ್ ರಾಣಾ, ಭಾರತದಲ್ಲಿ ಶೂಟಿಂಗ್ ಕ್ರೀಡೆಯನ್ನು ಜನಪ್ರಿಯಗೊಳಿಸಿದ ಕೀರ್ತಿಗೆ ಪಾತ್ರರಾದವರು. ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲೇ ಭಾರತದ ಅತ್ಯಂತ ಯಶಸ್ವಿ ಅಥ್ಲೀಟ್ ಆಗಿರುವ ರಾಣಾ, 4 ಆವೃತ್ತಿಗಳಲ್ಲಿ (1994, 1998, 2002, 2006) ಒಟ್ಟು 15 ಪದಕಗಳನ್ನು (9 ಚಿನ್ನ, 4 ಬೆಳ್ಳಿ, 2 ಕಂಚು) ಗೆದ್ದು ದಾಖಲೆ ಬರೆದಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ 4 ಚಿನ್ನದ ಪದಕ ಸೇರಿದಂತೆ 8 ಪದಕಗಳನ್ನು ಮುಡಿಗೇರಿಸಿಕೊಂಡಿದ್ದರು. ಇವರ ಅಪ್ರತಿಮ ಸಾಧನೆಗಾಗಿ ಸರ್ಕಾರ 1994ರಲ್ಲಿ ‘ಅರ್ಜುನ ಪ್ರಶಸ್ತಿ’ ಹಾಗೂ 1997ರಲ್ಲಿ ‘ಪದ್ಮಶ್ರೀ’ ನೀಡಿ ಗೌರವಿಸಿತ್ತು.
ಇದನ್ನೂ ಓದಿ:ಸಿಎಂ ವಿಜಯ್ ಜತೆಗೆ ಚೆಸ್ ಆಡಿದ ಪ್ರಜ್ಞಾನಂದ: 50 ಲಕ್ಷ ರೂ. 50 ಲಕ್ಷ ರೂ. ನಗದು ನೀಡಿದ ತಮಿಳುನಾಡು ಮುಖ್ಯಮಂತ್ರಿ
ಒಲಿಂಪಿಕ್ ಪದಕ ವಿಜೇತರನ್ನು ರೂಪಿಸಿದ ‘ದ್ರೋಣಾಚಾರ್ಯ’:
ಕ್ರೀಡಾ ಜೀವನದಿಂದ ನಿವೃತ್ತರಾದ ನಂತರ, ಜಸ್ಪಾಲ್ ರಾಣಾ ಅವರು ಭಾರತೀಯ ಶೂಟಿಂಗ್‌ನ ಭವಿಷ್ಯವನ್ನು ಉಜ್ವಲಗೊಳಿಸಲು ತರಬೇತುದಾರರಾಗಿ (Coach) ಸೇವೆ ಆರಂಭಿಸಿದರು. ದೇಶಕ್ಕೆ ಹಲವು ಯುವ ಶೂಟರ್‌ಗಳನ್ನು ಕೊಡುಗೆಯಾಗಿ ನೀಡಿದ ಅವರಿಗೆ 2020ರಲ್ಲಿ ‘ದ್ರೋಣಾಚಾರ್ಯ ಪ್ರಶಸ್ತಿ’ ಲಭಿಸಿತ್ತು. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಸ್ಟಾರ್ ಶೂಟರ್ ಮನು ಭಾಕರ್ ಅವರು ಐತಿಹಾಸಿಕ ಎರಡು ಕಂಚಿನ ಪದಕಗಳನ್ನು ಗೆಲ್ಲುವಲ್ಲಿ ರಾಣಾ ಅವರ ಕಠಿಣ ತರಬೇತಿ ಮತ್ತು ಮಾರ್ಗದರ್ಶನವೇ ಪ್ರಮುಖ ಕಾರಣವಾಗಿತ್ತು. ಮನು ಭಾಕರ್ ಮಾತ್ರವಲ್ಲದೆ ಸೌರಭ್ ಚೌಧರಿ, ಅನೀಶ್ ಭಿನ್ವಾಲಾ ಅವರಂತಹ ಘಟಾನುಘಟಿ ಶೂಟರ್‌ಗಳನ್ನು ಇವರು ದೇಶಕ್ಕೆ ಪರಿಚಯಿಸಿದ್ದರು. ಸದ್ಯ ಅವರು ಭಾರತದ ಪಿಸ್ತೂಲ್ ವಿಭಾಗದ ಹೈ-ಪರ್ಫಾರ್ಮೆನ್ಸ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಅಗಲಿಕೆ ಭಾರತೀಯ ಕ್ರೀಡಾ ಇತಿಹಾಸಕ್ಕೆ ತುಂಬಲಾರದ ನಷ್ಟವಾಗಿದೆ.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


