ಭಾರತೀಯ ನೌಕಾಪಡೆಗೆ ಮತ್ತೊಂದು ಬಲ: ಕಾರವಾರದ ಕದಂಬ ನೌಕಾನೆಲೆಯಲ್ಲಿ ‘INS ಸಮರ್ಥಕ್’ ಯುದ್ಧನೌಕೆ ಲೋಕಾರ್ಪಣೆ

ಕಾರವಾರ: ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಸ್ವದೇಶಿ ನಿರ್ಮಿತ ಅತ್ಯಾಧುನಿಕ ಬಹುಉದ್ದೇಶದ ಯುದ್ಧನೌಕೆ ‘INS ಸಮರ್ಥಕ್’ ಅಧಿಕೃತವಾಗಿ ನೌಕಾಪಡೆಯ ಸೇವೆಗೆ ಸೇರ್ಪಡೆಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಕಾರ್ಯನಿರತ ಕದಂಬ ನೌಕಾನೆಲೆಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ದೇಶದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಈ ನೌಕೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

ನೌಕೆಗೆ ಅಧಿಕೃತವಾಗಿ ರಾಷ್ಟ್ರಧ್ವಜ ಹಾಗೂ ನೌಕಾಪಡೆಯ ಧ್ವಜವನ್ನು ಅಳವಡಿಸುವ ಮೂಲಕ ಇದನ್ನು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಲಾಯಿತು. ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ‘ಮೇಕ್ ಇನ್ ಇಂಡಿಯಾ’ (Make in India) ಕಾರ್ಯಕ್ರಮದಡಿ ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನ ಬಳಸಿ ಈ ಬಹುಉದ್ದೇಶದ ಯುದ್ಧನೌಕೆಯನ್ನು ನಿರ್ಮಿಸಲಾಗಿದೆ.

ಇದನ್ನೂ ಓದಿ: ಅಮೆರಿಕ-ಪಾಕಿಸ್ತಾನ ಯುದ್ಧ ನಡೆದರೆ ಪಾಕ್ ಪರ ನಿಲ್ಲುತ್ತೇವೆ: ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ರಾಥೋಡ್ ವಿವಾದಾತ್ಮಕ ಹೇಳಿಕೆ

ಸಮುದ್ರದ ಮೇಲಿನ ಕಣ್ಗಾವಲು ಹಾಗೂ ಪ್ರಮುಖ ಗಸ್ತು ಕಾರ್ಯಾಚರಣೆಗಳಿಗಾಗಿ ಈ ನೌಕೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಕೇವಲ ಯುದ್ಧ ಕಾರ್ಯಾಚರಣೆ ಮಾತ್ರವಲ್ಲದೆ, ಮಾನವೀಯ ನೆರವು, ವಿಪತ್ತು ಪರಿಹಾರ ಕಾರ್ಯಗಳು, ಸಮುದ್ರದಲ್ಲಿ ಮುಳುಗಿದ ವಸ್ತುಗಳ ಪತ್ತೆ ಮತ್ತು ರಕ್ಷಣಾ ಕಾರ್ಯಗಳಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ. ಅಗತ್ಯ ಸಂದರ್ಭಗಳಲ್ಲಿ ಸಂಚಾರಿ ಆಸ್ಪತ್ರೆ ನೌಕೆಯಾಗಿಯೂ (Hospital Ship) ಸೇವೆ ಸಲ್ಲಿಸುವ ವಿಶಿಷ್ಟ ಸಾಮರ್ಥ್ಯವನ್ನು ಈ ನೌಕೆ ಹೊಂದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ