ಆಸ್ಪತ್ರೆ ಬಿಲ್‌ನಲ್ಲಿ ಇನ್ಮುಂದೆ ಔಷಧದ MRP ಜತೆ ಒರಿಜಿನಲ್ ರೇಟ್: ನವೆಂಬರ್ 1ರಿಂದ ರಾಜ್ಯಾದ್ಯಂತ ಹೊಸ ನಿಯಮ

ಬೆಂಗಳೂರು: ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳಿಗೆ ಚಿಕಿತ್ಸಾ ವೆಚ್ಚಕ್ಕಿಂತ ಹೆಚ್ಚಾಗಿ ಔಷಧ, ವೈದ್ಯಕೀಯ ಉಪಕರಣಗಳು ಹಾಗೂ ಸಪ್ಲೈಗಳ ಹೆಸರಿನಲ್ಲಿ ವಿಧಿಸುವ ಅಪಾರ ಮೊತ್ತದ ಬಿಲ್‌ಗಳೇ ದೊಡ್ಡ ಆತಂಕ ಹುಟ್ಟಿಸುತ್ತಿದ್ದವು. ಆಸ್ಪತ್ರೆಗಳು ಔಷಧಗಳನ್ನು ಎಷ್ಟು ಕಡಿಮೆ ಬೆಲೆಗೆ ಖರೀದಿ ಮಾಡುತ್ತವೆ ಮತ್ತು ರೋಗಿಗಳಿಗೆ ಎಷ್ಟೊಂದು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತವೆ ಎಂಬ ರಹಸ್ಯಕ್ಕೆ ಕೊನೆಗೂ ತೆರೆಬಿದ್ದಿದೆ. ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯು (FDA) ಈ ಹಗಲು ದೋಚಿಗೆ ಕಡಿವಾಣ ಹಾಕಲು ಕ್ರಾಂತಿಕಾರಿ ನಿಯಮ ಜಾರಿಗೆ ತಂದಿದ್ದು, ನವೆಂಬರ್ 1, 2026 ರಿಂದ ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಈ ಹೊಸ ಬಿಲ್ಲಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ.

ಇನ್ಮುಂದೆ ರೋಗಿಗಳಿಗೆ ನೀಡುವ ಮೆಡಿಕಲ್ ಬಿಲ್‌ನಲ್ಲಿ ಆಸ್ಪತ್ರೆಯು ಔಷಧವನ್ನು ಎಷ್ಟು ರೂಪಾಯಿಗೆ ಖರೀದಿ ಮಾಡಿದೆ (Base/Procurement Cost) ಹಾಗೂ ಅದರ ಗರಿಷ್ಠ ಚಿಲ್ಲರೆ ಬೆಲೆ (MRP) ಎಷ್ಟಿದೆ ಎಂಬ ಎರಡೂ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ರೋಗಿಗಳಿಗೆ ನೀಡುವ ಬಿಲ್‌ನಲ್ಲಿ ಕೇವಲ ಒಟ್ಟು ಮೊತ್ತ ನೀಡುವಂತಿಲ್ಲ. ಪ್ರತಿಯೊಂದು ಔಷಧದ ಬ್ರ್ಯಾಂಡ್ ಹೆಸರು, ಜನರಿಕ್ ಹೆಸರು, ಬ್ಯಾಚ್ ನಂಬರ್, ತಯಾರಿಕಾ ದಿನಾಂಕ (MFG Date) ಮತ್ತು ಎಕ್ಸ್‌ಪೈರಿ ದಿನಾಂಕದ (Expiry Date) ಸಂಪೂರ್ಣ ವಿವರ ಪ್ರತ್ಯೇಕವಾಗಿರಬೇಕು.

ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಎಲ್ಲಾ ರೀತಿಯ ಚಿಕಿತ್ಸೆಗಳು, ತಪಾಸಣೆಗಳು ಹಾಗೂ ಶಸ್ತ್ರಚಿಕಿತ್ಸೆಗಳ ಅಧಿಕೃತ ದರಪಟ್ಟಿಯನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಬೋರ್ಡ್ ಅಳವಡಿಸಬೇಕು. ರೋಗಿಗಳು ಹಾಗೂ ಅವರ ಸಂಬಂಧಿಕರು ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಚಿಕಿತ್ಸೆಯ ಅಂದಾಜು ದರವನ್ನು ಪರಿಶೀಲಿಸಲು ಇದು ಅನುಕೂಲವಾಗಲಿದೆ.

ಇದನ್ನೂ ಓದಿ: ರಾಜ್ಯದಲ್ಲಿ ‘ಹಾಫ್ ಹೆಲ್ಮೆಟ್’ ಸಂಪೂರ್ಣ ಬ್ಯಾನ್!: ಸಾರಿಗೆ ಇಲಾಖೆ ಖಡಕ್ ಆದೇಶ

ಕೇವಲ ಗುಳಿಗೆ/ಮಾತ್ರೆಗಳಷ್ಟೇ ಅಲ್ಲದೆ, ಶಸ್ತ್ರಚಿಕಿತ್ಸೆಗೆ ಬಳಸುವ ವೈದ್ಯಕೀಯ ಉಪಕರಣಗಳು, ಇಂಪ್ಲಾಂಟ್‌ಗಳು, ಸ್ಟೆಂಟ್‌ಗಳು ಹಾಗೂ ಧರಿಸಿ ಬಿಸಾಡುವ (Consumables & Disposables) ಸಾಮಾನಿಗೂ ಆಸ್ಪತ್ರೆ ನೀಡಿದ ಖರೀದಿ ಬೆಲೆ ಹಾಗೂ ರೋಗಿಯಿಂದ ವಸೂಲಿ ಮಾಡುತ್ತಿರುವ ದರ ಎರಡನ್ನೂ ನಮೂದಿಸಬೇಕು.  ಈ ನಿಯಮಗಳನ್ನು ಉಂಲ್ಲಘಿಸಿ ಪಾರದರ್ಶಕ ಬಿಲ್ ನೀಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ‘ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ಸ್’ (KPME) ಕಾಯ್ದೆ ಹಾಗೂ ಗ್ರಾಹಕರ ಹಕ್ಕುಗಳ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ