ಮಂಗಳೂರು: ಮಂಗಳೂರಿನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ (KDP) ಸಭೆಯು ಆಡಳಿತಾತ್ಮಕ ವೈಫಲ್ಯ, ಭ್ರಷ್ಟಾಚಾರ ಹಾಗೂ ರೈತರ ಸಮಸ್ಯೆಗಳ ಕುರಿತು ಕಾವೇರಿದ ಚರ್ಚೆಗೆ ಸಾಕ್ಷಿಯಾಯಿತು. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಪ್ರಬಲವಾಗಿ ಧ್ವನಿಯೆತ್ತಿ, ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
KRIDL ಶೇ. 7ರಷ್ಟು ಕಮಿಷನ್ ದಂಧೆ: ಸಿಟ್ಟಿಂಗ್ ಜಡ್ಜ್ ತನಿಖೆಗೆ ಆದೇಶ!
ಮಂಗಳೂರಿನ ಕೆಆರ್ಐಡಿಎಲ್ (KRIDL) ವಿಭಾಗದಲ್ಲಿ ಉಸ್ತುವಾರಿ ಸಚಿವರ ಹೆಸರು ಹೇಳಿಕೊಂಡು ಅಧಿಕಾರಿಗಳು ಗುತ್ತಿಗೆದಾರರಿಂದ ಶೇ. 7ರಷ್ಟು ಕಮಿಷನ್ ಪಡೆಯುತ್ತಿದ್ದಾರೆ ಎಂಬ ಗಂಭೀರ ಆರೋಪ ಸಭೆಯಲ್ಲಿ ಸಫೋಟಗೊಂಡಿತು. ಆಡಳಿತ ಪಕ್ಷದ ಶಾಸಕರೇ ಮುಖ್ಯಮಂತ್ರಿಗೆ ಬರೆದಿರುವ ಅಧಿಕೃತ ಪತ್ರವನ್ನು ಸಭೆಯ ಮುಂದಿಟ್ಟ ಕಿಶೋರ್ ಕುಮಾರ್ ಪುತ್ತೂರು, “ಇದು ಬಾಯಿಮಾತಿನ ಆರೋಪವಲ್ಲ. ಇದರ ಹಿಂದಿರುವ ಅಸಲಿ ಮುಖವಾಡಗಳು ಕಳಚಿಬೀಳಬೇಕು” ಎಂದು ಪಟ್ಟು ಹಿಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಇತರ ಶಾಸಕರು ಹಾಗೂ ಎಂಎಲ್ಸಿಗಳು ಈ ಧ್ವನಿಗೆ ಧ್ವನಿಗೂಡಿಸಿ, ಹಾಲಿ ನ್ಯಾಯಾಧೀಶರ (Sitting Judge) ಮೂಲಕ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದರು. ಪ್ರಕರಣದ ಗಂಭೀರತೆ ಅರಿತ ಉಸ್ತುವಾರಿ ಸಚಿವ ಯು.ಟಿ. ಖಾದರ್, ಸಿಟ್ಟಿಂಗ್ ಜಡ್ಜ್ ಪ್ಯಾನಲ್ ರಚಿಸಿ ತಕ್ಷಣವೇ ತನಿಖೆ ನಡೆಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಅವರಿಗೆ ಸಭೆಯಲ್ಲೇ ಖಡಕ್ ಆದೇಶ ನೀಡಿದರು. ಉಪ್ಪಿನಂಗಡಿ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸಿ ವರ್ಗಾವಣೆಯಾಗಿದ್ದ ಪಿಡಿಒ (PDO) ಅವರಿಗೆ, ಮತ್ತೆ ತಾಲೂಕು ಪಂಚಾಯತ್ ಇಒ ಮೂಲಕ ಅದೇ ಪಂಚಾಯಿತಿಗೆ ಪ್ರಭಾರ ಅಧಿಕಾರ ನೀಡಿದ್ದನ್ನು ಶಾಸಕರು ಕಟುವಾಗಿ ಪ್ರಶ್ನಿಸಿದರು.
ಇದನ್ನೂ ಓದಿ: ಜೋಹರ್ ಕೃತ್ಯವನ್ನು ಅತ್ಯಾಚಾರ ಸಂತ್ರಸ್ತರಿಗೆ ಹೋಲಿಸಿದ ಸ್ವರಾ ಭಾಸ್ಕರ್: ‘ನಿರ್ಲಜ್ಜತನ’ ಎಂದ ರಣವೀರ್ ಶೋರೆ
ಇಒಗೆ ಈ ಅಧಿಕಾರ ನೀಡಿದವರು ಯಾರು ಎಂಬ ಶಾಸಕರ ಮರುಪ್ರಶ್ನೆಗೆ ಜಿ.ಪಂ ಸಿಇಒ ಮೌನಕ್ಕೆ ಶರಣಾದರು. ತಕ್ಷಣವೇ ಸಭೆಯಲ್ಲೇ ಶಾಸಕರ ಒತ್ತಡಕ್ಕೆ ಮಣಿದ ಸಿಇಒ, “ಇಂದೇ ಉಪ್ಪಿನಂಗಡಿ ಪಿಡಿಒ ಅವರ ಹೆಚ್ಚುವರಿ ಪ್ರಭಾರ ಆದೇಶ ರದ್ದುಪಡಿಸಿ, ದಕ್ಷ ಅಧಿಕಾರಿಯನ್ನು ನಿಯೋಜಿಸಲಾಗುವುದು” ಎಂದು ಭರವಸೆ ನೀಡಿದರು.
ಕೃಷಿಕರ ಕೋವಿ ಪರವಾನಗಿ, ಕಾಡಾನೆ ಹಾವಳಿ & ಸಾರಿಗೆ ಸಮಸ್ಯೆ ಪರಿಹಾರ!
ಸಭೆಯಲ್ಲಿ ಸಾರ್ವಜನಿಕ ಮತ್ತು ಕೃಷಿಕರ ಜ್ವಲಂತ ಸಮಸ್ಯೆಗಳಿಗೆ ಪ್ರಮುಖ ಪರಿಹಾರಗಳು ಲಭಿಸಿದವು, ಕಾಡುಹಂದಿ, ಚಿರತೆ ಕಾಟದಿಂದ ತೋಟ-ಬೆಳೆ ರಕ್ಷಿಸಿಕೊಳ್ಳಲು ಗನ್ ಲೈಸೆನ್ಸ್ ಅಗತ್ಯ. ಚುನಾವಣಾ ವೇಳೆ ಸಾರಾಸಗಟಾಗಿ ಕೋವಿ ಸರೆಂಡರ್ ಮಾಡಿಸಿಕೊಳ್ಳುವುದಕ್ಕೆ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ಡಿಸಿ ಮತ್ತು ಎಸ್ಪಿ, ಸುಳ್ಯ-ಕಡಬ ಭಾಗದ ನೈಜ ಕೃಷಿಕರ ಕೋವಿ ಲೈಸೆನ್ಸ್ ನವೀಕರಣಕ್ಕೆ ತಕ್ಷಣವೇ ಕ್ರಮ ವಹಿಸುವುದಾಗಿ ಸ್ಪಷ್ಟಪಡಿಸಿದರು. ಆನೆ ಹಾವಳಿ ತಡೆಯಲು 48 ಸಿಬ್ಬಂದಿಯ ಎಲಿಫೆಂಟ್ ಟಾಸ್ಕ್ ಫೋರ್ಸ್ (ETF) ತಂಡವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲು ಅರಣ್ಯ ಸಚಿವರನ್ನು ಭೇಟಿ ಮಾಡುವುದಾಗಿ ಸಚಿವರು ತಿಳಿಸಿದರು. ಮಾಣಿ ಹಾಗೂ ಕಲ್ಲಡ್ಕ ಫ್ಲೈಓವರ್ ಮೇಲೆ ಕೆಎಸ್ಆರ್ಟಿಸಿ ದೂರದ ಬಸ್ಸುಗಳ ಸಂಚಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರ ದತ್ತಾಂಶ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್ಆರ್ಟಿಸಿ ಅಧೀಕ್ಷಕರು ತಿಳಿಸಿದರು.

