ಮರ್ಚೆಂಟ್ ನಾವಿ ಅಧಿಕಾರಿ ಸೌರಬ್ ರಜ್ಪೂತ್ ಅವರನ್ನು ಹತ್ಯೆ ಮಾಡಿ, ಅವರ ದೇಹವನ್ನು ತುಂಡರಿಸಿ ಸಿಮೆಂಟ್ ತುಂಬಿದ ನೀಲಿ ಪ್ಲಾಸ್ಟಿಕ್ ಡ್ರಮ್ನಲ್ಲಿ ಮುಚ್ಚಿಟ್ಟಿದ್ದ ಭೀಕರ ಪ್ರಕರಣದಲ್ಲಿ ಮೀರತ್ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಮೃತ ಸೌರಬ್ ರಜ್ಪೂತ್ ಅವರ ಪತ್ನಿ ಮುಸ್ಕಾನ್ ರಸ್ತೋಗಿ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಅವರಿಗೆ ಮೀರತ್ ನ್ಯಾಯಾಲಯವು ಬುಧವಾರ ಮರಣದಂಡನೆ ವಿಧಿಸಿದೆ. ಈ ಪ್ರಕರಣವು ಬೆಳಕಿಗೆ ಬಂದು 19 ತಿಂಗಳಿಗೂ ಅಧಿಕ ಕಾಲ, 126 ನ್ಯಾಯಾಲಯದ ವಿಚಾರಣೆಗಳು ಹಾಗೂ 22 ಪ್ರಾಸಿಕ್ಯೂಷನ್ ಸಾಕ್ಷಿಗಳ ವಿಚಾರಣೆಯ ಬಳಿಕ ಸೆಪ್ಟೆಂಬರ್ 30 ರಂದು ನ್ಯಾಯಾಲಯವು ಇಬ್ಬರನ್ನೂ ದೋಷಿಗಳೆಂದು ಘೋಷಿಸಿತ್ತು. ಪ್ರಾಸಿಕ್ಯೂಷನ್ ಇಬ್ಬರಿಗೂ ಮರಣದಂಡನೆ ನೀಡುವಂತೆ ಕೋರಿತ್ತು.
ಕೊಲೆ ಬೆಳಕಿಗೆ ಬಂದಿದ್ದು ಹೇಗೆ?
35 ವರ್ಷ ವಯಸ್ಸಿನ ಸೌರಬ್ ರಜ್ಪೂತ್ ಅವರು ಫೆಬ್ರವರಿ 24-25, 2025 ರಂದು ಲಂಡನ್ನಿಂದ ಮೀರತ್ಗೆ ವಾಪಸಾಗಿದ್ದರು. ಅದರ ಮರುದಿನವೇ ಮುಸ್ಕಾನ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು. ಪ್ರಾಸಿಕ್ಯೂಷನ್ ಪ್ರಕಾರ, ಮಾರ್ಚ್ 4 ರಂದು ಮುಸ್ಕಾನ್ ಮತ್ತು ಸಾಹಿಲ್ ಸೇರಿ ಸೌರಬ್ ಅವರಿಗೆ ನಿದ್ರೆ ಮಾತ್ರೆ ನೀಡಿ, ಬಳಿಕ ಕತ್ತಿಯಿಂದ ಹತ್ಯೆ ಮಾಡಿದ್ದರು. ನಂತರ ಅವರ ದೇಹವನ್ನು ತುಂಡರಿಸಿ ಸಿಮೆಂಟ್ ಮತ್ತು ಮರಳನ್ನು ತುಂಬಿದ ನೀಲಿ ಪ್ಲಾಸ್ಟಿಕ್ ಡ್ರಮ್ನಲ್ಲಿ ಶವದ ಅವಶೇಷಗಳನ್ನು ಮರೆಮಾಚಿದ್ದರು.
ಇದನ್ನೂ ಓದಿ : NEET ಪ್ರತಿಭಟನೆಯಲ್ಲಿ ಪತ್ರಕರ್ತೆಗೆ ಲೈಂಗಿಕ ದೌರ್ಜನ್ಯ: ಕಾಮುಕನ ಬಂಧನ, ಬರಿಗಾಲಿನಲ್ಲಿ ‘ಕ್ರೈಮ್ ಸೀನ್ ರಿಕನ್ಸ್ಟ್ರಕ್ಷನ್’
ಮೊದಲು ಶವವನ್ನು ಬ್ರೀಫ್ಕೇಸ್ನಲ್ಲಿ ವಿಲೇವಾರಿ ಮಾಡಲು ಯೋಚಿಸಿದ್ದರೂ, ಶವವು ಅದರಲ್ಲಿ ಹೊಂದಿಕೆಯಾಗದ ಕಾರಣ ಡ್ರಮ್ ಅನ್ನು ಬಳಸಿದ್ದರು. ಬಳಿಕ ಇಬ್ಬರೂ ಹಿಮಾಚಲ ಪ್ರದೇಶಕ್ಕೆ ತೆರಳಿದ್ದರು. ಮಾರ್ಚ್ ಮಧ್ಯಭಾಗದಲ್ಲಿ ಡ್ರಮ್ನಿಂದ ಬಂದ ದುರ್ವಾಸನೆಯಿಂದಾಗಿ ಮಾರ್ಚ್ 17 ರಂದು ಸೌರಬ್ ಅವರ ಶಶಾವಾವಶೇಷಗಳು ಪತ್ತೆಯಾದವು. ಮುಸ್ಕಾನ್ ತನ್ನ ತವರು ಮನೆಯವರಿಗೆ ಕೊಲೆಯ ಬಗ್ಗೆ ತಿಳಿಸಿದ್ದು, ಬಳಿಕ ಪೊಲೀಸರನ್ನು ಸಂಪರ್ಕಿಸಲಾಗಿತ್ತು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

