ಮೈಸೂರು: ಮೈಸೂರು ಕಂಬಳದಲ್ಲಿ ಉಡುಪಿಯ ಕಕ್ಕುಂಜೆಯ ಕೋಣಗಳು ಅದ್ಭುತ ವೇಗದಲ್ಲಿ ಓಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದು, ಕಂಬಳಾಭಿಮಾನಿಗಳ ಗಮನ ಸೆಳೆದಿವೆ. ನೇಗಿಲು ಕಿರಿಯ ವಿಭಾಗದಲ್ಲಿ ಕೇವಲ 8.85 ಸೆಕೆಂಡ್ಗಳಲ್ಲಿ 100 ಮೀಟರ್ ಕರೆಯನ್ನು ಕ್ರಮಿಸಿ ಗಮನಾರ್ಹ ಸಾಧನೆ ಮಾಡಿವೆ.
ರಾಧಾನಿಲಯದ ಸಂತೋಷ್ ಶಿವರಾಜ್ ಪೂಜಾರಿ ಅವರ ಕೋಣಗಳನ್ನು ಬೈಂದೂರಿನ ವಿಶ್ವನಾಥ ದೇವಾಡಿಗ ಅವರು ಓಡಿಸಿದ್ದು, ತಮ್ಮ ಚಾಕಚಕ್ಯತೆ ಹಾಗೂ ಕೋಣಗಳ ವೇಗದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಉಸೇನ್ ಬೋಲ್ಟ್ ವೇಗದ ದಾಖಲೆಯೂ ಉಡೀಸ್
ವಿಶ್ವದ ಅತಿ ವೇಗದ ಓಟಗಾರರಲ್ಲಿ ಒಬ್ಬರಾದ ಉಸೇನ್ ಬೋಲ್ಟ್ ಅವರು 100 ಮೀಟರ್ ಓಟವನ್ನು 9.58 ಸೆಕೆಂಡ್ಗಳಲ್ಲಿ ಪೂರ್ಣಗೊಳಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಮೈಸೂರು ಕಂಬಳದಲ್ಲಿ ಕಕ್ಕುಂಜೆಯ ಕೋಣಗಳು 8.85 ಸೆಕೆಂಡ್ಗಳಲ್ಲಿ 100 ಮೀಟರ್ ಕರೆಯನ್ನು ಕ್ರಮಿಸಿರುವುದು ಕ್ರೀಡಾಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿವೆ.
ಇದನ್ನೂ ಓದಿ:ನಾಡಹಬ್ಬ ಮೈಸೂರು ದಸರಾದಲ್ಲಿ ಮೊದಲ ಬಾರಿಗೆ ‘ಕಂಬಳ’ ಹಬ್ಬ!: ಮೀಯಾರಿನಲ್ಲಿ 160 ಕೋಣಗಳ ಆಯ್ಕೆ ಪ್ರಕ್ರಿಯೆ
ಕಕ್ಕುಂಜೆ ಕೋಣಗಳಿಗೆ ಅಭಿಮಾನಿಗಳ ಮೆಚ್ಚುಗೆ
ಮೈಸೂರು ಕಂಬಳದಲ್ಲಿ ಕಕ್ಕುಂಜೆಯ ಕೋಣಗಳು ತೋರಿದ ವೇಗ ಹಾಗೂ ವಿಶ್ವನಾಥ ದೇವಾಡಿಗ ಅವರ ಓಡಿಸುವ ಕೌಶಲಕ್ಕೆ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನೇಗಿಲು ಕಿರಿಯ ವಿಭಾಗದಲ್ಲಿ ಮೂಡಿಬಂದ ಈ ಸಾಧನೆ ಕಂಬಳದ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದ್ದು, ಕರಾವಳಿಯ ಕಂಬಳ ಪರಂಪರೆಯ ಹೆಮ್ಮೆಯನ್ನು ಎತ್ತಿಹಿಡಿದಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

