ದೆಹಲಿ: ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ (131ನೇ ಸಂವಿಧಾನ ತಿದ್ದುಪಡಿ ಮಸೂದೆ) ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತ ಸಿಗದೆ ಮಸೂದೆ ಬಿದ್ದು ಹೋದ ಮರುದಿನವೇ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಮಹಿಳೆಯರ ಕನಸನ್ನು ತುಳಿದಿರುವ ವಿರೋಧ ಪಕ್ಷಗಳು ಇದಕ್ಕೆ ತಕ್ಕ ಶಿಕ್ಷೆ ಅನುಭವಿಸಲಿವೆ ಎಂದು ಅವರು ಎಚ್ಚರಿಸಿದ್ದಾರೆ.
ಮಹಿಳಾ ಮೀಸಲಾತಿಯನ್ನು ತಡೆಹಿಡಿದ ಕಾಂಗ್ರೆಸ್, ಡಿಎಂಕೆ, ಟಿಎಂಸಿ ಸೇರಿದಂತೆ ಇಂಡಿ ಒಕ್ಕೂಟದ ಪಕ್ಷಗಳು ಮಹಿಳಾ ಸಬಲೀಕರಣ ಮತ್ತು ಸಂವಿಧಾನದ ‘ಅಪರಾಧಿಗಳು’ ಎಂದು ಪ್ರಧಾನಿ ಮೋದಿ ಕರೆದಿದ್ದಾರೆ.”ದೇಶದ ಮಹಿಳೆಯರ ಆಸೆ ಮತ್ತು ಕನಸುಗಳನ್ನು ಹೇಗೆ ಹೊಸಕಿ ಹಾಕಲಾಗಿದೆ ಎಂಬುದನ್ನು ಇಡೀ ರಾಷ್ಟ್ರ ನೋಡುತ್ತಿದೆ. ಮಸೂದೆ ವಿಫಲವಾದಾಗ ವಿರೋಧ ಪಕ್ಷದವರು ಸಂಭ್ರಮಿಸಿದ್ದು ವಿಷಾದನೀಯ” ಎಂದು ಅವರು ಕಿಡಿಕಾರಿದ್ದಾರೆ.

ಮಹಿಳೆಯರಿಗೆ ನ್ಯಾಯ ಒದಗಿಸುವ ಈ ಐತಿಹಾಸಿಕ ಅವಕಾಶವನ್ನು ತಪ್ಪಿಸಿದ ವಿರೋಧ ಪಕ್ಷಗಳು ಮುಂದಿನ ದಿನಗಳಲ್ಲಿ ಭಾರಿ ರಾಜಕೀಯ ಬೆಲೆ ತೆರಬೇಕಾಗುತ್ತದೆ ಎಂದು ಮೋದಿ ಎಚ್ಚರಿಸಿದ್ದಾರೆ.ಮಹಿಳೆಯರ ಪ್ರಗತಿಗಾಗಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದರೂ, ವಿರೋಧ ಪಕ್ಷಗಳ ಅಸಹಕಾರದಿಂದ ಅದು ಸಾಧ್ಯವಾಗಲಿಲ್ಲ. ಇದಕ್ಕಾಗಿ ದೇಶದ ತಾಯಂದಿರು ಮತ್ತು ಸಹೋದರಿಯರಲ್ಲಿ ಪ್ರಧಾನಿ ಕ್ಷಮೆಯಾಚಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ: ತುಟ್ಟಿಭತ್ಯೆ (DA) ಶೇ. 2ರಷ್ಟು ಹೆಚ್ಚಳಕ್ಕೆ ಸಂಪುಟ ಅನುಮೋದನೆ!

ಶುಕ್ರವಾರ ರಾತ್ರಿ ನಡೆದ ಮತದಾನದಲ್ಲಿ ಮಸೂದೆಯ ಪರವಾಗಿ 298 ಮತಗಳು ಚಲಾವಣೆಯಾದರೆ, ವಿರುದ್ಧವಾಗಿ 230 ಮತಗಳು ಬಿದ್ದವು. ಸಂವಿಧಾನ ತಿದ್ದುಪಡಿಗೆ ಅಗತ್ಯವಿದ್ದ 352 ಮತಗಳ ಬಹುಮತ ಲಭಿಸದ ಕಾರಣ ಮಸೂದೆಯು ಅಂಗೀಕಾರಗೊಳ್ಳಲಿಲ್ಲ. ಇದು ಕಳೆದ 12 ವರ್ಷಗಳಲ್ಲಿ ಮೋದಿ ಸರ್ಕಾರಕ್ಕೆ ಸಂಸತ್ತಿನಲ್ಲಿ ಎದುರಾದ ಮೊದಲ ದೊಡ್ಡ ಹಿನ್ನಡೆಯಾಗಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

