ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ: ಮಹಾರಾಷ್ಟ್ರದಲ್ಲಿ ತಡೆಹಿಡಿದಿದ್ದ ಲಾರಿಗಳ ಬಿಡುಗಡೆಗೆ ಸಿಎಂ ಫಡ್ನವೀಸ್ ಒಪ್ಪಿಗೆ

ದೆಹಲಿ: ಕರ್ನಾಟಕದ ಅಡಿಕೆ ಬೆಳೆಗಾರರು ಮತ್ತು ವರ್ತಕರ ಹಿತರಕ್ಷಣೆಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಅವರು ಧಾವಿಸಿದ್ದಾರೆ. ಮಹಾರಾಷ್ಟ್ರದಲ್ಲಿ ದಿನಗಟ್ಟಲೆ ತಡೆಹಿಡಿಯಲಾಗಿದ್ದ ಕರ್ನಾಟಕದ ಅಡಿಕೆ ಸರಕುಳ್ಳ ವಾಹನಗಳ ತುರ್ತು ಬಿಡುಗಡೆಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಜೋಶಿ ನಡೆಸಿದ ಮಾತುಕತೆ ಸಂಪೂರ್ಣ ಯಶಸ್ವಿಯಾಗಿದೆ.

ದೆಹಲಿಯಲ್ಲಿ ನಡೆದ ಈ ಉನ್ನತ ಮಟ್ಟದ ಭೇಟಿಯಲ್ಲಿ, ಕರ್ನಾಟಕದ ರೈತರ ಮತ್ತು ಪ್ರಮುಖ ಅಡಿಕೆ ಸಹಕಾರಿ ಸಂಸ್ಥೆಗಳ ಸಮಸ್ಯೆಗೆ ಕೇಂದ್ರ ಸಚಿವರು ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಸಕಾರಾತ್ಮಕವಾಗಿ ಸ್ಪಂದಿಸಿದ ಮಹಾರಾಷ್ಟ್ರ ಸಿಎಂ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮನವಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ತಮ್ಮ ರಾಜ್ಯದಲ್ಲಿ ತಪಾಸಣೆಯ ನೆಪದಲ್ಲಿ ತಡೆಹಿಡಿಯಲಾಗಿರುವ ಕರ್ನಾಟಕದ ಅಡಿಕೆ ಲಾರಿಗಳನ್ನು ತಕ್ಷಣವೇ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಉತ್ತರ ಭಾರತದ ಮಾರುಕಟ್ಟೆಗಳಿಗೆ ತೆರಳುವ ಕರ್ನಾಟಕದ ಅಡಿಕೆ ಸಾಗಣೆಗೆ ಯಾವುದೇ ರೀತಿಯ ಅಡ್ಡಿಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಸಹ ಸಿಎಂ ಫಡ್ನವೀಸ್ ಹೇಳಿದ್ದಾರೆ.

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​ :


ಏನಿದು ಅಡಿಕೆ ಸಾಗಣೆ ಸಮಸ್ಯೆ?

ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದಾದ ಅಡಿಕೆಯನ್ನು ರಾಜ್ಯದಿಂದ ಉತ್ತರ ಭಾರತದ ಪ್ರಮುಖ ಮಾರುಕಟ್ಟೆಗಳಿಗೆ ದೊಡ್ಡ ಪ್ರಮಾಣದಲ್ಲಿ ರವಾನೆ ಮಾಡಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಹಾರಾಷ್ಟ್ರದಾದ್ಯಂತ ತಪಾಸಣೆಯ ನೆಪ ಒಡ್ಡಿ ಕರ್ನಾಟಕದ ಅಡಿಕೆ ಸಾಗಣೆ ವಾಹನಗಳನ್ನು ದಿನಗಟ್ಟಲೆ ತಡೆಹಿಡಿಯಲಾಗುತ್ತಿತ್ತು. ಇದರಿಂದಾಗಿ ಅಡಿಕೆ ಮೂಟೆಗಳು ಹಾನಿಗೊಳಗಾಗಿ ವರ್ತಕರಿಗೆ ಹಾಗೂ ರೈತರಿಗೆ ಭಾರಿ ಆರ್ಥಿಕ ನಷ್ಟ ಉಂಟಾಗುತ್ತಿತ್ತು. ಇದು ರಾಜ್ಯದ ಅಡಿಕೆ ವಲಯದಲ್ಲಿ ತೀವ್ರ ಆತಂಕ ಮೂಡಿಸಿತ್ತು.

ಇದನ್ನೂ ಓದಿ; ಮಾಣಿ–ಸಂಪಾಜೆ ಹೆದ್ದಾರಿ ದುರಸ್ತಿಗೆ 49.22 ಕೋಟಿ ರೂ. ವಿಶೇಷ ಅನುದಾನ ಮಂಜೂರು; ಚತುಷ್ಪಥ ಯೋಜನೆಗೆ ವೇಗ
ಜೋಶಿ ಅವರ ಮಧ್ಯಪ್ರವೇಶಕ್ಕೆ ಕಾರಣವಾದ ನಿಯೋಗದ ಭೇಟಿ

ಈ ಗಂಭೀರ ಸಮಸ್ಯೆಯ ಹಿನ್ನೆಲೆಯಲ್ಲಿ, ಕರ್ನಾಟಕದ ಪ್ರಮುಖ ಅಡಿಕೆ ಸಹಕಾರಿ ಸಂಸ್ಥೆಗಳಾದ ಕ್ಯಾಂಪ್ಕೋ , ಮಾಮ್ಕೋಸ್, ತುಮ್ಕೋಸ್ ಹಾಗೂ ರಾಜ್ಯ ಅಡಿಕೆ ಸಹಕಾರಿ ಮಹಾಮಂಡಳದ ನಿಯೋಗವು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ ಇತ್ತೀಚೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿತ್ತು. ಮಹಾರಾಷ್ಟ್ರದಲ್ಲಿ ಎದುರಾಗಿರುವ ಈ ಕಿರಿಕಿರಿಯನ್ನು ತಪ್ಪಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ನಿಯೋಗ ಒತ್ತಾಯಿಸಿತ್ತು.

ನಿಯೋಗದ ಮನವಿಗೆ ತಕ್ಷಣವೇ ಸ್ಪಂದಿಸಿದ ಸಚಿವ ಜೋಶಿ ಅವರು, ದೆಹಲಿಯಲ್ಲೇ ಬೀಡುಬಿಟ್ಟಿದ್ದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಮಂಗಳವಾರ ಖುದ್ದಾಗಿ ಭೇಟಿ ಮಾಡಿ ಯಶಸ್ವಿ ಮಾತುಕತೆ ನಡೆಸುವ ಮೂಲಕ ಅಡಿಕೆ ಬೆಳೆಗಾರರ ಮುಖದಲ್ಲಿ ಮತ್ತೆ ಮಂದಹಾಸ ಮೂಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *