ಅಮೆರಿಕ-ಇರಾನ್ ನಡುವೆ ಮತ್ತೆ ಭುಗಿಲೆದ್ದ ಯುದ್ಧದ ಕಿಡಿ: ಇರಾನ್ ಮೇಲೆ ಯುಎಸ್ ಭೀಕರ ವೈಮಾನಿಕ ದಾಳಿ; ಕಚ್ಚಾ ತೈಲ ಪರವಾನಗಿ ರದ್ದು

ಟೆಹ್ರಾನ್: ಇರಾನ್ ಮೇಲೆ ಅಮೆರಿಕ (US) ಮಂಗಳವಾರ ಭೀಕರ ಮಿಲಿಟರಿ ದಾಳಿಗಳನ್ನು ನಡೆಸಿದೆ. ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಮೂರು ವಾಣಿಜ್ಯ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕ ಈ ಕಠಿಣ ಕ್ರಮ ಕೈಗೊಂಡಿದೆ. ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಜಾರಿಯಲ್ಲಿದ್ದ ಕದನ ವಿರಾಮ ಒಪ್ಪಂದದ ನಡುವೆಯೂ ಈ ದಾಳಿ ನಡೆದಿರುವುದು ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ತುತ್ತತುದಿಗೆ ತಲುಪಿಸಿದೆ.

ದಾಳಿಯ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಟ್ವೀಟ್​ ಮಾಡಿರುವ ಯುಎಸ್ ಸೆಂಟ್ರಲ್ ಕಮಾಂಡ್ , “ಇರಾನ್ ಪ್ರದರ್ಶಿಸುತ್ತಿರುವ ಆಕ್ರಮಣಶೀಲತೆ ಅನಾವಶ್ಯಕ, ಅತ್ಯಂತ ಅಪಾಯಕಾರಿ ಮತ್ತು ಕದನ ವಿರಾಮದ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ಕಿಡಿಕಾರಿದೆ. ಅಮೆರಿಕದ ಅಧಿಕೃತ ಮೂಲಗಳ ಪ್ರಕಾರ, ಈ ವೈಮಾನಿಕ ದಾಳಿಯಲ್ಲಿ ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಗಳು, ಕರಾವಳಿ ಕಣ್ಗಾವಲು ಉಪಕರಣಗಳು, ಕ್ಷಿಪಣಿ ನೆಲೆಗಳು, ಹಡಗು ನಿರೋಧಕ ಕ್ರೂಸ್ ಕ್ಷಿಪಣಿಗಳು ಮತ್ತು ಡ್ರೋನ್ ಉಡಾವಣಾ ಕೇಂದ್ರಗಳನ್ನು ಗುರಿಯಾಗಿಸಿ ಧ್ವಂಸಗೊಳಿಸಲಾಗಿದೆ. ಇರಾನ್‌ನ ಪ್ರಮುಖ ಬಂದರು ನಗರಿ ಸಿರಿಕ್, ಖೇಶ್ಮ್ ದ್ವೀಪ ಮತ್ತು ಬಂದರ್ ಅಬ್ಬಾಸ್‌ನಲ್ಲಿ ಭಾರಿ ಸ್ಫೋಟಗಳು ಸಂಭವಿಸಿವೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.

Advertisement

ಇರಾನ್ ಕಚ್ಚಾ ತೈಲ ಪರವಾನಗಿ ರದ್ದುಗೊಳಿಸಿದ ಟ್ರಂಪ್ ಸರ್ಕಾರ

ಮಿಲಿಟರಿ ದಾಳಿಯ ಜೊತೆಗೆ ಇರಾನ್ ವಿರುದ್ಧ ಅಮೆರಿಕ ಆರ್ಥಿಕ ಯುದ್ಧವನ್ನೂ ಸಾರಿದೆ. ಆಗಸ್ಟ್ 21 ರವರೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಮಾರಾಟ ಮಾಡಲು ಇರಾನ್‌ಗೆ ನೀಡಲಾಗಿದ್ದ ತಾತ್ಕಾಲಿಕ ಪರವಾನಗಿಯನ್ನು ವಾಷಿಂಗ್ಟನ್ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ. ಜುಲೈ 17 ರ ಒಳಗಾಗಿ ತನ್ನ ಎಲ್ಲಾ ತೈಲ ವ್ಯವಹಾರಗಳನ್ನು ಸ್ಥಗಿತಗೊಳಿಸುವಂತೆ ಇರಾನ್‌ಗೆ ಗಡುವು ನೀಡಲಾಗಿದೆ. ಅಮೆರಿಕದ ಈ ಹಠಾತ್ ನಿರ್ಧಾರದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

ಹಡಗುಗಳ ಮೇಲಿನ ದಾಳಿಯೇ ಕಾರಣ!

ಇರಾನ್‌ನ ಡ್ರೋನ್ ದಾಳಿಯಿಂದಾಗಿ ಕತಾರ್‌ನ ಎಲ್‌ಎನ್‌ಜಿ (LNG) ಟ್ಯಾಂಕರ್ ಹಡಗಿಗೆ ಬೆಂಕಿ ಹೊತ್ತಿಕೊಂಡಿತ್ತು. ಇದಾದ ಬಳಿಕ ಒಮಾನ್ ಸಮುದ್ರದ ಬಳಿ ಸೌದಿ ಅರೇಬಿಯಾದ ತೈಲ ಟ್ಯಾಂಕರ್ ಮೇಲೂ ದಾಳಿಯಾಗಿತ್ತು. ಈ ಸರಣಿ ಹಡಗು ದಾಳಿಗಳೇ ಅಮೆರಿಕವನ್ನು ಕೆರಳಿಸಿದ್ದು, ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಪ್ರಚೋದನೆ ನೀಡಿದೆ. ಆದರೆ ಇರಾನ್ ಈ ಆರೋಪಗಳನ್ನು ತಳ್ಳಿಹಾಕಿದೆ.

ಖಮೇನಿ ಅಂತ್ಯಕ್ರಿಯೆ ನಡುವೆಯೇ ಭೀತಿ

ಇದೆಲ್ಲದರ ನಡುವೆ, ಇರಾನ್‌ನ ಮಾಜಿ ಸುಪ್ರೀಂ ಲೀಡರ್ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಇರಾನ್‌ನ ಕ್ಯೂಮ್ ಮತ್ತು ಇರಾಕ್‌ನ ಪವಿತ್ರ ನಗರಿ ನಜಾಫ್‌ನಲ್ಲಿ ಸಾಗುತ್ತಿದ್ದು, ಲಕ್ಷಾಂತರ ಜನ ಜಮಾಯಿಸಿದ್ದಾರೆ. ಇರಾನ್ ಮೇಲೆ ಅಮೆರಿಕ ದಾಳಿ ಮಾಡುತ್ತಿದ್ದಂತೆ ಇರಾಕ್‌ನಲ್ಲಿದ್ದ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರು ತುರ್ತಾಗಿ ಸ್ವದೇಶಕ್ಕೆ ಮರಳಿದ್ದಾರೆ.

ಇದನ್ನೂ ಓದಿ: ಭಾರತದ 31ನೇ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್ ಅಧಿಕಾರ ಸ್ವೀಕಾರ

‘ಒಂದೇ ಗಂಟೆಯಲ್ಲಿ ಧ್ವಂಸ ಮಾಡುತ್ತೇವೆ’ ಎಂದು ಟ್ರಂಪ್ ಎಚ್ಚರಿಕೆ!

ಕದನ ವಿರಾಮದ ಅವಧಿಯಲ್ಲಿ ಶಾಂತಿ ಮಾತುಕತೆಗಳು ವಿಫಲವಾದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. “ನಾವು ಒಂದೋ ಒಪ್ಪಂದ ಮಾಡಿಕೊಳ್ಳುತ್ತೇವೆ, ಇಲ್ಲವೇ ಈ ಕೆಲಸವನ್ನು ಸಂಪೂರ್ಣವಾಗಿ ಮುಗಿಸುತ್ತೇವೆ. ಕೇವಲ ಒಂದು ಗಂಟೆಯೊಳಗೆ ನಾವು ಇರಾನ್‌ನ ಸೇತುವೆಗಳನ್ನು ಮತ್ತು ಅವರ ಇಂಧನ ಪೂರೈಕೆಯನ್ನು ಧ್ವಂಸಗೊಳಿಸಬಲ್ಲೆವು” ಎಂದು ಟ್ರಂಪ್ ಗುಡುಗಿದ್ದಾರೆ.

ಇದಕ್ಕೆ ಪ್ರತಿಯಾಗಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಕ್ಚಿ ಪ್ರತಿಕ್ರಿಯಿಸಿದ್ದು, “ಅಮೆರಿಕದ ಬೆದರಿಕೆಗಳು ಮುಂದುವರಿದರೆ ನಾವು ಯಾವುದೇ ಅಂತಿಮ ಒಪ್ಪಂದದ ಮಾತುಕತೆಗಳನ್ನು ಆರಂಭಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *