ಮೈಸೂರು: ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವ 2026ರ ಆಚರಣೆಯ ವೈಖರಿ, ಆಡಳಿತಾತ್ಮಕ ಗೊಂದಲ ಹಾಗೂ ಭದ್ರತಾ ಲೋಪಗಳ ಕುರಿತು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ (Pramoda Devi Wadiyar) ಅವರು ತಮ್ಮ ತೀವ್ರ ನಿರಾಶೆಯನ್ನು ವ್ಯಕ್ತಪಡಿಸಿ ಬಹಿರಂಗ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ವಿಜಯದಶಮಿಯ ಧಾರ್ಮಿಕ ವಿಧಿವಿಧಾನಗಳಿಗೆ ಸರ್ಕಾರದ ಅಡೆತಡೆ ಉಂಟಾಗುತ್ತಿರುವುದನ್ನು ಪ್ರಸ್ತಾಪಿಸಿರುವ ಅವರು, ದಸರಾ ಆಚರಣೆಯ ಸುಗಮ ನಿರ್ವಹಣೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಕೆಲವು ಪ್ರಮುಖ ಹಾಗೂ ಮಹತ್ವದ ಸಲಹೆಗಳನ್ನು ನೀಡಿದ್ದಾರೆ.
ಅಂಬಾರಿ ಭದ್ರತಾ ಲೋಪ ಹಾಗೂ ಡಿಡಿಸಿಪಿ ವರ್ತನೆಗೆ ಆಕ್ರೋಶ:
ಚಿನ್ನದ ಅಂಬಾರಿ ಬಳಿ ಸೆಲ್ಫಿ ಜಾಲ:
ಬಂಗಾರದ ಅಂಬಾರಿಯ ಸುತ್ತಲೂ ಕಟ್ಟುನಿಟ್ಟಿನ ಭದ್ರತಾ ನಿಯಮಗಳಿದ್ದರೂ, ಅದನ್ನು ಉಲ್ಲಂಘಿಸಿ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರು ಸೆಲ್ಫಿ ಮತ್ತು ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ಮುಗಿಬಿದ್ದಿರುವುದು ಶಿಸ್ತಿನ ಕೊರತೆಯನ್ನು ಎತ್ತಿಹಿಡಿಯುತ್ತದೆ. ಇದು ಸಂಪೂರ್ಣ ಕರ್ತವ್ಯ ಲೋಪ ಎಂದು ಪ್ರಮೋದಾದೇವಿ ಕಿಡಿಕಾರಿದ್ದಾರೆ.
ಅನಧಿಕೃತ ವ್ಯಕ್ತಿಗಳ ಪ್ರವೇಶ:
ವಿವಿಧ ಸರ್ಕಾರಿ ಇಲಾಖೆಗಳಿಗೆ ಸೇರಿದ ಹಲವಾರು ಅನಧಿಕೃತ ವ್ಯಕ್ತಿಗಳು ಅಂಬಾರಿ ಇರುವ ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶಿಸಿದ್ದು, ಪೊಲೀಸ್ ಆಯುಕ್ತರು ನೀಡಿದ್ದ ಭರವಸೆಯನ್ನು ಉಲ್ಲಂಘಿಸಲಾಗಿದೆ.
ರಾಜಮನೆತನದ ಪ್ರತಿನಿಧಿಗಳ ಮೇಲೆ ತಳ್ಳಾಟ:
ಅಂಬಾರಿಯನ್ನು ಸುರಕ್ಷಿತವಾಗಿ ಮರಳಿ ಪಡೆಯಲು ತೆರಳಿದ್ದ, ಅಧಿಕೃತ ‘ಡ್ಯೂಟಿ ಪಾಸ್’ ಹೊಂದಿದ್ದ ರಾಜಮನೆತನದ ಪ್ರತಿನಿಧಿಗಳನ್ನು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ (DCP Law and Order) ಹಾಗೂ ಪೊಲೀಸ್ ಸಿಬ್ಬಂದಿ ತಳ್ಳಾಡಿ ಅನುಚಿತವಾಗಿ ವರ್ತಿಸಿದ್ದಾರೆ. ಅಂಬಾರಿ ಎಂಬುದು ರಾಜಮನೆತನದ ಖಾಸಗಿ ಆಸ್ತಿಯಾಗಿದ್ದು ಸರ್ಕಾರದ ಆಸ್ತಿಯಲ್ಲ. ಪ್ರತಿನಿಧಿಗಳ ಮೇಲಿನ ಈ ನಡೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಅವರು ಖಂಡಿಸಿದ್ದಾರೆ.
ಸರ್ಕಾರಕ್ಕೆ ಪ್ರಮೋದಾದೇವಿ ಒಡೆಯರ್ ನೀಡಿದ 3 ಪ್ರಮುಖ ಸಲಹೆಗಳು:
ರಾಜಮನೆತನದ ಧಾರ್ಮಿಕ ಆಚರಣೆಗಳಿಗೆ ಅಡೆತಡೆಯಾಗದಂತೆ ಹಾಗೂ ಸಾರ್ವಜನಿಕರ ‘ನಾಡಹಬ್ಬ’ ದಸರಾ ಸುಗಮವಾಗಿ ನೆರವೇರಲು ಪ್ರಮೋದಾದೇವಿ ಅವರು ಮೂರು ಪ್ರಮುಖ ಪ್ರಸ್ತಾವನೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ:
ಮೊದಲ 7 ದಿನ ಸರ್ಕಾರಿ ಸಾಂಸ್ಕೃತಿಕ ಕಾರ್ಯಕ್ರಮ:
ದಸರಾ ಮಹೋತ್ಸವದ ಮೊದಲ ದಿನದಿಂದ ಏಳನೇ ದಿನದವರೆಗೆ ಸರ್ಕಾರವು ಎಂದಿನಂತೆ ತನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರಮನೆ ಆವರಣದಲ್ಲಿ ನಡೆಸಬಹುದು.
ಆಯುಧ ಪೂಜೆ & ವಿಜಯದಶಮಿಯಂದು ಅರಮನೆ ಮುಕ್ತವಾಗಿರಲಿ:
ಆಯುಧ ಪೂಜೆ ಮತ್ತು ವಿಜಯದಶಮಿಯ ದಿನಗಳಂದು ಅರಮನೆ ಆವರಣವನ್ನು ಯಾವುದೇ ಸರ್ಕಾರಿ ಹಸ್ತಕ್ಷೇಪವಿಲ್ಲದೆ ಸಂಪೂರ್ಣ ಮುಕ್ತವಾಗಿಡಬೇಕು. ಇದರಿಂದ ರಾಜ ಕುಟುಂಬವು ತನ್ನ ಧಾರ್ಮಿಕ ವಿಧಿವಿಧಾನಗಳನ್ನು ಹಾಗೂ ಪೂಜೆಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ನೆರವೇರಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಮೈಸೂರು ದಸರಾ ಕಂಬಳದ ಫಲಿತಾಂಶ: ಗೆದ್ದ ಕೋಣಗಳ ವಿವರಗಳು ಇಲ್ಲಿವೆ
ರಥೋತ್ಸವದ ದಿನ ಜಂಬೂಸವಾರಿ ಮರವಣಿಗೆ:
ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ/ರಥೋತ್ಸವದ ದಿನದಂದು ಸಂಜೆ ಸೂಕ್ತ ಸಮಯದಲ್ಲಿ ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಮರವಣಿಗೆಯನ್ನು ಸರ್ಕಾರವು ಆಯೋಜಿಸುವುದು ಸೂಕ್ತವಾಗಿದೆ.
ಇದಲ್ಲದೆ, 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಂಬಾರಿ ಹೊರಲಿರುವ ಆನೆಯ ಹೆಸರನ್ನು ರಾಜಮನೆತನದಿಂದ ಮುಚ್ಚಿಡಲಾಗಿತ್ತು ಹಾಗೂ ಕೊನೆಯ ಕ್ಷಣದವರೆಗೂ ಮಾಹಿತಿ ನೀಡದೆ ತೀವ್ರ ಒತ್ತಡ ಹೇರಲಾಗಿತ್ತು ಎಂದೂ ಅವರು ಪತ್ರಿಕಾ ಹೇಳಿಕೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

