ಬೆಂಗಳೂರು: ನಾಳೆ (ಭಾನುವಾರ) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಭಾರಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ಅಭಿಮಾನಿಗಳಿಗೆ ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ.
ಕ್ರೀಡಾಂಗಣದ ಒಳಗೆ ಪ್ರವೇಶಿಸಲು ಅಧಿಕೃತ ಟಿಕೆಟ್ ಇಲ್ಲದವರು ಸ್ಟೇಡಿಯಂನ ಸುತ್ತಮುತ್ತ ಸುಳಿಯಬಾರದು. ಟಿಕೆಟ್ ಇಲ್ಲದೆ ಅನಗತ್ಯವಾಗಿ ಗುಂಪು ಸೇರಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಕ್ರೀಡಾಂಗಣದ ಬಳಿ ವಾಹನ ನಿಲುಗಡೆಗೆ (Parking) ಸಮಸ್ಯೆಯಾಗುವುದರಿಂದ ಅಭಿಮಾನಿಗಳು ಮೆಟ್ರೋ ಅಥವಾ ಬಿಎಂಟಿಸಿ ಬಸ್‌ಗಳನ್ನು ಹೆಚ್ಚಾಗಿ ಬಳಸಲು ಕೋರಲಾಗಿದೆ. ಕಳೆದ ಪಂದ್ಯಗಳ ವೇಳೆ ಮೊಬೈಲ್ ಫೋನ್ ಕಳ್ಳತನದ ಪ್ರಕರಣಗಳು ವರದಿಯಾಗಿದ್ದು, ಜನದಟ್ಟಣೆಯಲ್ಲಿ ತಮ್ಮ ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಈಗಾಗಲೇ ಹಲವು ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೈದಾನದ ಒಳಗೆ ಯಾವುದೇ ರೀತಿಯ ಗದ್ದಲ ಅಥವಾ ಕಿರಿಕ್ ಮಾಡುವವರ ಮೇಲೆ ನಿಗಾ ಇರಿಸಲು ಸಿಸಿಟಿವಿ ಮತ್ತು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಭಿಮಾನಿಗಳ ಅನುಕೂಲಕ್ಕಾಗಿ ಬಿಎಂಆರ್ಸಿಎಲ್ (BMRCL) ಮೆಟ್ರೋ ಸೇವೆಯನ್ನು ನಾಳೆ ಮಧ್ಯರಾತ್ರಿ ದಾಟಿದ ನಂತರವೂ ವಿಸ್ತರಿಸಿದೆ. ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಮೆಟ್ರೋ ಸೇವೆಗಳು ಮುಂಜಾನೆ 2 ಗಂಟೆಯವರೆಗೆ ಲಭ್ಯವಿರುತ್ತವೆ.

ಇದನ್ನೂ ಓದಿ: ತಮಿಳುನಾಡು: ಕೈ ತಪ್ಪಿದ ಬಿಜೆಪಿ ಟಿಕೆಟ್; ಮೌನ ಮುರಿದ ಸಿಂಗಂ ಅಣ್ಣಾಮಲೈ, ಬೇಸರಕ್ಕೆ ಕಾರಣವೇನು?
ಮೆಜೆಸ್ಟಿಕ್ (ನಾಡಪ್ರಭು ಕೆಂಪೇಗೌಡ ನಿಲ್ದಾಣ) ನಿಂದ ನಾಲ್ಕು ದಿಕ್ಕುಗಳಿಗೆ ಕೊನೆಯ ರೈಲು ಮಧ್ಯರಾತ್ರಿ 01:30ಕ್ಕೆ ಹೊರಡಲಿದೆ. ಕ್ರೀಡಾಂಗಣಕ್ಕೆ ಹತ್ತಿರದ ಕಬ್ಬನ್ ಪಾರ್ಕ್ ಮತ್ತು ಎಂ.ಜಿ. ರಸ್ತೆ ನಿಲ್ದಾಣಗಳಲ್ಲಿ ಜನದಟ್ಟಣೆ ನಿರ್ವಹಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

