ಮಂಗಳೂರು: ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಅತ್ಯಂತ ಭಯಾನಕ ರೀತಿಯಲ್ಲಿ ಏರಿಕೆಯಾಗುತ್ತಿದೆ. ಕೇವಲ ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಶೇ. 120ರಷ್ಟು ಭಾರಿ ಜಿಗಿತ ಕಂಡಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಆರೋಗ್ಯ ಇಲಾಖೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷ 3,278 ರಷ್ಟಿದ್ದ ಹೃದಯಾಘಾತ ಪ್ರಕರಣಗಳ ಸಂಖ್ಯೆ ಈ ವರ್ಷ ಬರೋಬ್ಬರಿ 7,212 ಕ್ಕೆ ಏರಿಕೆಯಾಗಿದೆ. ಮಂಗಳೂರಿನ ಪ್ರತಿಷ್ಠಿತ ಸರ್ಕಾರಿ ವೆನ್ಲಾಕ್ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹೃದಯಾಘಾತಕ್ಕೆ ಸಂಬಂಧಿಸಿದ ತುರ್ತು ಚಿಕಿತ್ಸೆ ಪ್ರಕರಣಗಳು ದ್ವಿಗುಣಗೊಂಡಿವೆ.

ಇದನ್ನೂ ಓದಿ: ಇನ್ನೂ ಸುಲಭವಾಗಲಿದೆ ಮಂಗಳೂರು–ಬೆಂಗಳೂರು ಪ್ರಯಾಣ; ಉದ್ಯೋಗಿಗಳಿಗೆ ಅನುಕೂಲ
ಏರಿಕೆ ಹಿಂದಿನ ಕಾರಣಗಳೇನು?

ಈ ಹಠಾತ್ ಏರಿಕೆಗೆ ಪ್ರಮುಖವಾಗಿ ಈ ಕೆಳಗಿನ ಅಂಶಗಳು ಕಾರಣವಿರಬಹುದು ಎಂದು ವೈದ್ಯಕೀಯ ತಜ್ಞರು ಶಂಕಿಸಿದ್ದಾರೆ:
- ಬದಲಾದ ಜೀವನಶೈಲಿ ಮತ್ತು ದೈಹಿಕ ಶ್ರಮದ ಕೊರತೆ.
- ಜಂಕ್ ಫುಡ್ ಹಾಗೂ ಅವೈಜ್ಞಾನಿಕ ಆಹಾರ ಪದ್ಧತಿ.
- ಮಾನಸಿಕ ಒತ್ತಡ ಮತ್ತು ಆತಂಕ.
- ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ದೀರ್ಘಕಾಲದ ಸಮಸ್ಯೆಗಳು.
ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿರುವ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಎದೆನೋವು, ಅತಿಯಾದ ಬೆವರುವಿಕೆ, ಉಸಿರಾಟದ ತೊಂದರೆ ಅಥವಾ ಎಡಗೈ ನೋವು ಕಾಣಿಸಿಕೊಂಡರೆ ನಿರ್ಲಕ್ಷಿಸದೆ ತಕ್ಷಣವೇ ಸಮೀಪದ ವೈದ್ಯರನ್ನು ಸಂಪರ್ಕಿಸಬೇಕು ಎಂದು ಮನವಿ ಮಾಡಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

