ಪುತ್ತೂರು: ರಜತ ಮಹೋತ್ಸವದ ಸಂಭ್ರಮದಲ್ಲಿರುವ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತವು 2025-26ನೇ ಆರ್ಥಿಕ ವರ್ಷದಲ್ಲಿ ಒಟ್ಟು 801 ಕೋಟಿ ರೂ. ವ್ಯವಹಾರ ದಾಖಲಿಸಿದ್ದು, 7.27 ಕೋಟಿ ರೂ. ನಿವ್ವಳ ಲಾಭ ಪಡೆದಿದೆ.
2001ರಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆಯಲ್ಲಿ ಪ್ರಾರಂಭವಾದ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು 2025-26 ಆರ್ಥಿಕ ವರ್ಷಾಂತ್ಯಕ್ಕೆ 7.27 ಕೋಟಿ ನಿವ್ವಳ ಲಾಭ ಗಳಿಸಿದೆ. ಸಹಕಾರಿಯು ಆರ್ಥಿಕ ವರ್ಷಾಂತ್ಯಕ್ಕೆ ಸದಸ್ಯರಿಂದ ರೂ.10.29 ಕೋಟಿ ಪಾಲು ಬಂಡವಾಳವನ್ನು ಸಂಗ್ರಹಿಸಿದ್ದು, ರೂ.414 ಕೋಟಿ ಠೇವಣಾತಿಯನ್ನು ಸಂಗ್ರಹಿಸಿ ಶೇ.15.55 ಹಾಗೂ ರೂ.387ಕೋಟಿ ಸಾಲವನ್ನು ವಿತರಿಸಿ ಶೇ.17.58 ಪ್ರಗತಿಯನ್ನು ದಾಖಲಿಸಿದೆ.

ಸಹಕಾರಿಯ ಒಟ್ಟು ವ್ಯವಹಾರ ರೂ.801 ಕೋಟಿ ಆಗಿದ್ದು ಶೇ.16.50 ಪ್ರಗತಿಯಾಗಿರುತ್ತದೆ. ಸಾಲ ವಸೂಲಾತಿಯಲ್ಲಿ ಕೂಡ ಈ ವರ್ಷ ಗಣನೀಯ ಪ್ರಗತಿಯಾಗಿದ್ದು ನಿವ್ವಳ ಎನ್‌ಪಿಎ 0% ದಾಖಲಿಸಿರುತ್ತದೆ. ಪ್ರಸ್ತುತ 52,431 ಸದಸ್ಯರನ್ನು ಹೊಂದಿರುವ ಸಹಕಾರಿಯು 20 ಶಾಖೆಗಳನ್ನು ಹೊಂದಿದ್ದು ರೂ. 41.16 ಕೋಟಿ ಸ್ವಂತನಿಧಿಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಶಾಖೆಗಳನ್ನು ವಿಸ್ತರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ಇದನ್ನೂ ಓದಿ: ಮಂಗಳೂರು ಬಂದರಿನ ಬರ್ತ್ ನಂ. 9 ಆಧುನೀಕರಣ: LPG, ಕ್ರೂಡ್ ಹ್ಯಾಂಡ್ಲಿಂಗ್ ಸಾಮರ್ಥ್ಯ ಹೆಚ್ಚಳಕ್ಕೆ ಉತ್ತೇಜನ

ಸಹಕಾರಿಯ ಪೂರಕ ಸಂಸ್ಥೆಯಾದ ಶ್ರೀಸರಸ್ವತಿ ಚಾರಿಟೇಬಲ್ ಟ್ರಸ್ಟ್ ಮೂಲಕ ಅಶಕ್ತರಿಗೆ ನೆರವು, ಆರೋಗ್ಯ ಶಿಬಿರಗಳು, ಸಾವಯವ ಕೃಷಿ ತರಬೇತಿ, ಮಹಿಳಾ ಸಬಲೀಕರಣಕ್ಕಾಗಿ ವಿವಿಧ ಕಾರ್ಯಕ್ರಮಗಳು, ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಮುಂತಾದ ಸಾಮಾಜಿಕ ಸೇವಾಕಾರ್ಯಗಳನ್ನು ಮಾಡುತ್ತಿದ್ದು ಇದನ್ನು ಇನ್ನಷ್ಟು ಹೆಚ್ಚಿಸುವ ಯೋಜನೆಗಳನ್ನು ಹಮ್ಮಿಕೊಂಡಿರುತ್ತದೆ ಹಾಗೂ ಸಹಕಾರಿಯ ರಜತ ಮಹೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ಯೋಜನೆಯನ್ನು ರೂಪಿಸಲಾಗಿದೆ.
ಸಹಕಾರಿ ಸಂಘದಲ್ಲಿ ಸದಸ್ಯರಿಗೆ ತ್ವರಿತ ಸೇವೆಯನ್ನು ನೀಡುವ ಸಲುವಾಗಿ ಸಿಬಿಎಸ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಆಕರ್ಷಕ ಬಡ್ಡಿದರದಲ್ಲಿ ಠೇವಣಿಗಳ ಸ್ವೀಕಾರ, ವಿವಿಧ ಉದ್ದೇಶದ ಸಾಲಗಳು, ಜೀವವಿಮೆ ಹಾಗೂ ಸಾಮಾನ್ಯ ವಿಮೆಗಳು, ಪಾನ್ ಕಾರ್ಡ್, ಆಯ್ದಶಾಖೆಗಳಲ್ಲಿ ಸೇಫ್ ಲಾಕರ್ ಮುಂತಾದ ಸೌಲಭ್ಯವನ್ನು ಸದಸ್ಯರಿಗೆ ನೀಡಲಾಗುತ್ತಿದೆ. ಪ್ರಸ್ತುತ 400 ದಿನಗಳ ಸಾಮಾನ್ಯ ಸದಸ್ಯರ ಠೇವಣಿಗೆ 9.60% ಮತ್ತು ವಿಶೇಷ ಠೇವಣಿಗಳಿಗೆ 10% ಬಡ್ಡಿದರ ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಂಡು ಸಹಕಾರಿಯ ಪ್ರಗತಿಯಲ್ಲಿ ಕೈ ಜೋಡಿಸುವಂತೆ ಸಹಕಾರಿಯ ಅಧ್ಯಕ್ಷ ಎಸ್‌ಆರ್ ಸತೀಶ್ಚಂದ್ರ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಸಂತ ನಾಯಕ್ ಎ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಜತಮಹೋತ್ಸವ ಆಚರಿಸುತ್ತಿರುವ ಸಹಕಾರಿಗೆ ರೂ.801 ಕೋಟಿ ವ್ಯವಹಾರ ದಾಖಲಿಸಿರುವುದು ಸಂಘದ ಗರಿಮೆಯಾಗಿದೆ. ರೂ.7.27 ಕೋಟಿ ನಿವ್ವಳಲಾಭ ಪಡೆದಿದ್ದು, ಇದು ಸದಸ್ಯರ ಆಶೀರ್ವಾದದ ಫಲ ಎಂದು ಎಸ್‌ಆರ್ ಸತೀಶ್ಚಂದ್ರ ಹೇಳಿದ್ದಾರೆ.
ಸಹಕಾರಿಯ ಸಮಗ್ರ ಅಭಿವೃದ್ಧಿಗೆ ವೃತ್ತಿಪರ ಆಡಳಿತ ಮಂಡಲಿ, ಸಕ್ರಿಯ ಸದಸ್ಯರು ಮತ್ತು ದಕ್ಷ ಸಿಬ್ಬಂದಿವರ್ಗವೇ ಕಾರಣ ಎಂದು ವಸಂತನಾಯಕ್ ಎ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

