ಶೃಂಗೇರಿ ಮರು ಮತ ಎಣಿಕೆ ಲೆಕ್ಕಾಚಾರ ಉಲ್ಟಪಲ್ಟ: ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡಗೆ ಹಿನ್ನಡೆ, ಬಿಜೆಪಿ ಅಭ್ಯರ್ಥಿ ಜೀವರಾಜ್ ಮುನ್ನಡೆ

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದರಿಂದ ಚುನಾವಣಾ ಲೆಕ್ಕಾಚಾರದಲ್ಲಿ ಮಹತ್ವದ ಬದಲಾವಣೆ ಸಂಭವಿಸಿದೆ. ಹೈಕೋರ್ಟ್ ಆದೇಶದಂತೆ ನಡೆದ ಮರು ಎಣಿಕೆಯ ಬಳಿಕ ಫಲಿತಾಂಶದಲ್ಲಿ ಚುನಾವಣೆಯಲ್ಲು ಗೆದ್ದಿದ್ದ ಕಾಂಗ್ರೆಸ್ ಅಭ್ಯರ್ಥಿ ಟಿಡಿ ರಾಜೇಗೌಡ ಅವರಿಗೆ ಹಿನ್ನಡೆಯಾಗಿದ್ದು, ಬಿಜೆಪಿ ಅಭ್ಯರ್ಥಿ ಡಿಎನ್ ಜೀವರಾಜ್ ಮುನ್ನಡೆ ಸಾಧಿಸಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಶಾಸಕ ಡಿ.ಎನ್. ಜೀವರಾಜ್ ಅವರು, “ಈ ಹಿಂದೆ ಅಸಿಂಧು ಎಂದು ಘೋಷಿಸಲಾಗಿದ್ದ ಅಂಚೆ ಮತಗಳಲ್ಲಿ ಡಿಕ್ಲರೇಷನ್ ಇಲ್ಲದ ಮತಗಳನ್ನು ಕೈಬಿಟ್ಟು, ಉಳಿದ ಸಿಂಧು ಮತಗಳನ್ನು ಮರು ಎಣಿಕೆಗೆ ಒಳಪಡಿಸಲಾಗಿದೆ. ಈಗ ಲಭ್ಯವಿರುವ ಲೆಕ್ಕಾಚಾರದ ಪ್ರಕಾರ ನನಗೆ ಬಹುಮತ ಲಭಿಸಿದೆ” ಎಂದು ಹೇಳಿದರು.

Advertisement

ಮರು ಎಣಿಕೆ ವೇಳೆ ಆರಂಭದಲ್ಲಿ ಸ್ಟ್ರಾಂಗ್ ರೂಮ್ ಸಂಬಂಧ ಕೆಲ ಗೊಂದಲಗಳು ಉಂಟಾಗಿದ್ದವು ಎಂದು ತಿಳಿಸಿದ ಅವರು, ಶನಿವಾರ ಬೆಳಗ್ಗೆ 9 ಗಂಟೆಗೆ ಸುಮಾರು 22 ಟ್ರಂಕ್‌ಗಳನ್ನು ತೆರೆಯಲಾಗಿದ್ದು, ಬ್ಯಾಲೆಟ್ ಪೇಪರ್‌ಗಳ ಪರಿಶೀಲನೆ ನಡೆಸಲಾಗಿದೆ ಎಂದರು.

ಇದನ್ನೂ ಓದಿ: ವಿನಯ್ ಕುಲಕರ್ಣಿ ಶಾಸಕತ್ವ ಅನರ್ಹ: ಅಧಿಕೃತ ಆದೇಶ ಹೊರಡಿಸಿದ ವಿಧಾನಸಭೆ; ಧಾರವಾಡ ಗ್ರಾಮೀಣ ಕ್ಷೇತ್ರ ಈಗ ತೆರವು!

Advertisement

“ಹೈಕೋರ್ಟ್ ನಿರ್ದೇಶನದಂತೆ ಕೇವಲ ಮತಗಳ ಎಣಿಕೆ ಮಾಡಿ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸುವುದೇ ಪ್ರಸ್ತುತ ಪ್ರಕ್ರಿಯೆ. ವರದಿ ಸಲ್ಲಿಕೆಯ ಬಳಿಕ ಆಯೋಗ ಮುಂದಿನ ಆದೇಶ ನೀಡಲಿದೆ. ಫಲಿತಾಂಶ ಘೋಷಣೆ ಕುರಿತು ಅಂತಿಮ ತೀರ್ಮಾನ ಆಯೋಗವೇ ಕೈಗೊಳ್ಳಬೇಕು” ಎಂದು ಜೀವರಾಜ್ ಸ್ಪಷ್ಟಪಡಿಸಿದರು.

2023ರ ಮೇ 13ರಂದು ಸಲ್ಲಿಸಿದ್ದ ಅರ್ಜಿಯಿಂದ ಆರಂಭವಾದ ಮೂರು ವರ್ಷಗಳ ಸತತ ಹೋರಾಟಕ್ಕೆ ಇದೀಗ ಫಲ ದೊರೆತಂತಾಗಿದೆ ಎಂದು ಅವರು ತಿಳಿಸಿದರು. ಆನ್‌ಲೈನ್ ವ್ಯವಸ್ಥೆ ಇರುವುದರಿಂದ ಅಂತಿಮ ವಿವರಗಳು ಶೀಘ್ರದಲ್ಲೇ ಲಭ್ಯವಾಗುವ ಸಾಧ್ಯತೆ ಇದೆ ಎಂದರು.

ಸತ್ಯಕ್ಕೆ ಜಯ ಎಂದ ಬಿ.ವೈ. ವಿಜಯೇಂದ್ರ

ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯ ಬೆಳವಣಿಗೆ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮೂಡಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಇದನ್ನು “ಸತ್ಯಕ್ಕೆ ಜಯ” ಎಂದು ವರ್ಣಿಸಿದ್ದಾರೆ.

ಈ ಕುರಿತು ಮಾತನಾಡಿದ ವಿಜಯೇಂದ್ರ ಅವರು, “2023ರಲ್ಲಿ ಸೋಲು ಕಂಡ ಬಳಿಕ ಡಿ.ಎನ್. ಜೀವರಾಜ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ಸುಪ್ರೀಂ ಕೋರ್ಟ್‌ವರೆಗೂ ಹೋಗಿತ್ತು. ಇದೀಗ ಹೈಕೋರ್ಟ್ ಆದೇಶದಂತೆ ಅಂಚೆ ಮತಗಳ ಮರು ಎಣಿಕೆ ನಡೆದಿದೆ. ಮಧ್ಯರಾತ್ರಿಯೇ ನಮಗೆ ಮಾಹಿತಿ ಲಭಿಸಿದ್ದು, ಜೀವರಾಜ್ ಅವರು 56 ಮತಗಳ ಅಂತರದಿಂದ ಗೆದ್ದಿದ್ದಾರೆ” ಎಂದು ಹೇಳಿದರು.

“ಜೀವರಾಜ್ ಅವರು ಜನರ ಆಶೀರ್ವಾದದಿಂದ ಗೆದ್ದಿದ್ದಾರೆ. ಕಳೆದ ಮೂರು ವರ್ಷಗಳಿಂದ ಅವರಿಗೆ ಅನ್ಯಾಯವಾಗಿದೆ. ಇನ್ನು ಉಳಿದ ಅವಧಿಯಲ್ಲಿ ಗೌರವಯುತವಾಗಿ ಶಾಸಕರಾಗಿ ಜನಸೇವೆಗೆ ಅವಕಾಶ ನೀಡಬೇಕು” ಎಂದು ವಿಜಯೇಂದ್ರ ಮನವಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು