ಕಲ್ಲಡ್ಕ: ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಮಧುಕರ ಸಭಾಂಗಣದಲ್ಲಿ ಆಗಸ್ಟ್ 06 ರಂದು 2026-2027ನೇ ಶೈಕ್ಷಣಿಕ ವರ್ಷದ ಕಾಲೇಜ್ ಅಭಿವೃದ್ಧಿ ಸಮಿತಿ (CDC) ಸಭೆ ನಡೆಯಿತು.
ಈ ಸಭೆಯಲ್ಲಿ ಸಮಿತಿಯ ನೂತನ ಪದಾಧಿಕಾರಿಗಳನ್ನು ಅಧಿಕೃತವಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಸರ್ವಸಮ್ಮತಿಯಿಂದ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಸಂಸ್ಥೆಯ ಶೈಕ್ಷಣಿಕ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೊಸ ಸಮಿತಿ ಕಾರ್ಯಾಚರಿಸಲಿದೆ.
ಅಧ್ಯಕ್ಷರನ್ನಾಗಿ ಉಮೇಶ್ ಸಾಲಿಯಾನ್, ಉಪಾಧ್ಯಕ್ಷರನ್ನಾಗಿ ರಶ್ಮಿ, ಕಾರ್ಯದರ್ಶಿಯನ್ನಾಗಿ ವಿದ್ಯಾ, ಜೊತೆ ಕಾರ್ಯದರ್ಶಿಯನ್ನಾಗಿ ಮೋನಪ್ಪ ಸೂರ್ಯ ಅವರನ್ನು ಆಯ್ಕೆ ಮಾಡಲಾಯಿತು.
ವಿದ್ಯಾಸಂಸ್ಥೆಯ ಸಂಸ್ಥಾಪಕ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಕಾಲೇಜಿನ ಶೈಕ್ಷಣಿಕ ಪ್ರಗತಿ ಹಾಗೂ ಅಭಿವೃದ್ಧಿ ಕುರಿತು ಸಮಿತಿ ಸದಸ್ಯರಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಸಮಿತಿಯ ವಿವಿಧ ಸದಸ್ಯರು ಕಾಲೇಜಿನ ಏಳಿಗೆಗಾಗಿ ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡರು.
ಇದನ್ನೂ ಓದಿ; ಅಂಬಿಕಾ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ‘ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್’ ರಾಜ್ಯ ಪುರಸ್ಕಾರ ಗೌರವ
ಶ್ರೀರಾಮ ವಿದ್ಯಾಕೇಂದ್ರದ ಕಾರ್ಯನಿರ್ವಹಣಾಧಿಕಾರಿ ಹಾಗೂ ಶ್ರೀರಾಮ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಅವರು ಪ್ರಸ್ತಾವಿಕವಾಗಿ ಮಾತನಾಡಿ ಸಭೆಯ ಉದ್ದೇಶಗಳನ್ನು ವಿವರಿಸಿದರು.
ಸಭೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಖಜಾಂಚಿ ಸತೀಶ್ ಶಿವಗಿರಿ, ಪದವಿ ಪೂರ್ವ ವಿಭಾಗದ ಪ್ರಾಂಶುಪಾಲ ವಸಂತ ಬಲ್ಲಾಳ್, ಸಹ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ರವಿರಾಜ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕಿ ರೋಹಿಣಿ ನಿರೂಪಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

