ಮಂಗಳೂರು ದಸರಾ ಸಂಭ್ರಮದ ನಡುವೆ ಸೆಮಿಸ್ಟರ್ ಪರೀಕ್ಷೆ: ಸೈಂಟ್ ಆಗ್ನೆಸ್ ಕಾಲೇಜು ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು, ಎಬಿವಿಪಿ ಆಕ್ರೋಶ

ಮಂಗಳೂರು : ನಾಡಹಬ್ಬ ದಸರಾ ಹಬ್ಬದ ಸಡಗರ ಹಾಗೂ ರಜೆಯ ಅವಧಿಯಲ್ಲೇ ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ಆಯೋಜಿಸಿರುವ ಮಂಗಳೂರಿನ ಪ್ರತಿಷ್ಠಿತ ಸೈಂಟ್ ಆಗ್ನೆಸ್ ಕಾಲೇಜು (St Agnes College) ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿಗಳು ಮತ್ತು ಎಬಿವಿಪಿ (ABVP) ಸಂಘಟನೆಯು ತೀವ್ರ ಪ್ರತಿಭಟನೆಗೆ ಇಳಿದಿದ್ದಾರೆ. ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕಿದ್ದ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಪರೀಕ್ಷೆ ನಡೆಸಿ ಅನ್ಯಾಯ ಮಾಡುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ಬೆಂದೂರ್‌ವೆಲ್ ಬಳಿ ಇರುವ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಸೋಮವಾರದಿಂದ ಅಕ್ಟೋಬರ್ 28ರವರೆಗೆ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆಗಳನ್ನು ನಿಗದಿಪಡಿಸಲಾಗಿದೆ.

ಪರೀಕ್ಷೆ ಬಹಿಷ್ಕರಿಸಿ ಕಾಲೇಜು ಗೇಟ್ ಎದುರು ವಿದ್ಯಾರ್ಥಿಗಳ ಧರಣಿ:

ವಿಶ್ವವಿಖ್ಯಾತ ಮಂಗಳೂರು ದಸರಾ ಹಾಗೂ ನವರಾತ್ರಿ ಹಬ್ಬದ ರಜೆ ಹಾಗೂ ಆಚರಣೆಯ ಸಮಯದಲ್ಲೇ ಪರೀಕ್ಷೆಗಳನ್ನು ನಿಗದಿಪಡಿಸಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಮುಂಚಿತವಾಗಿಯೇ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದರು. ಆದರೆ ಕಾಲೇಜು ಆಡಳಿತ ಮಂಡಳಿಯು ಇದಕ್ಕೆ ಯಾವುದೇ ಸಕಾರಾತ್ಮಕ ಸ್ಪಂದನೆ ನೀಡದೆ ಪರೀಕ್ಷೆ ಮುಂದುವರಿಸಲು ನಿರ್ಧರಿಸಿದೆ.  ಆಡಳಿತ ಮಂಡಳಿಯ ಕಠಿಣ ಧೋರಣೆಗೆ ಬೇಸತ್ತು ನೂರಾರು ವಿದ್ಯಾರ್ಥಿಗಳು ಪರೀಕ್ಷೆಯನ್ನು ಅಧಿಕೃತವಾಗಿ ಬಹಿಷ್ಕರಿಸಿ, ಕಾಲೇಜಿನ ಮುಖ್ಯ ಗೇಟ್ ಎದುರು ಕುಳಿತು ಧರಣಿ ನಡೆಸಿದರು.

ವಿದ್ಯಾರ್ಥಿಗಳ ಈ ಪ್ರತಿಭಟನೆಗೆ ಎಬಿವಿಪಿ ವಿದ್ಯಾರ್ಥಿ ಸಂಘಟನೆ ಸಂಪೂರ್ಣ ಬೆಂಬಲ ಸೂಚಿಸಿದ್ದು, ಈ ಕುರಿತು ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೂ ಅಧಿಕೃತ ದೂರು ಸಲ್ಲಿಸಲಾಗಿದೆ. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು, ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿ ಎಬಿವಿಪಿ ವಿದ್ಯಾರ್ಥಿ ನಾಯಕರನ್ನು ವಶಕ್ಕೆ ಪಡೆದು ಪೊಲೀಸ್ ಜೀಪಿನಲ್ಲಿ ಕರೆದೊಯ್ಯಲು ಮುಂದಾದರು. ಇದರಿಂದ ಆಕ್ರೋಶ ಭುಗಿಲೆದ್ದಿತು.

 ಪೊಲೀಸರ ಕ್ರಮವನ್ನು ವಿರೋಧಿಸಿ ವಿದ್ಯಾರ್ಥಿನಿಯರು ಮತ್ತು ಕಾರ್ಯಕರ್ತರು ಪೊಲೀಸ್ ಜೀಪ್‌ಗೆ ಅಡ್ಡಲಾಗಿ ನಿಂತು ರಸ್ತೆ ತಡೆ ನಡೆಸಿದರು. ಕೆಲ ವಿದ್ಯಾರ್ಥಿಗಳು ಜೀಪ್ ಎದುರಲ್ಲೇ ಮಲಗಿ ನಾಯಕರನ್ನು ಬಿಡುಗಡೆ ಮಾಡುವಂತೆ ಪಟ್ಟು ಹಿಡಿದರು. ಸ್ಥಳದಲ್ಲಿ ಡಿಸಿಪಿ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರೂ, ವಿದ್ಯಾರ್ಥಿಗಳ ಉಗ್ರ ಪ್ರತಿರೋಧಕ್ಕೆ ಮಣಿಯಬೇಕಾಯಿತು. ಅಂತಿಮವಾಗಿ ಪೊಲೀಸರು ಜೀಪನ್ನು ಬದಿಗೆ ಹಾಕಿ, ವಶಕ್ಕೆ ಪಡೆದಿದ್ದ ಎಬಿವಿಪಿ ನಾಯಕರನ್ನು ಬಿಡುಗಡೆ ಮಾಡಬೇಕಾಯಿತು. ನಾಯಕರ ಬಿಡುಗಡೆಯಾಗುವವರೆಗೆ ಜಾಗ ಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ಕಾಲೇಜು ಗೇಟ್ ಎದುರು ಪ್ರತಿಭಟನೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ವೇಣೂರು ಅರಣ್ಯ ವ್ಯಾಪ್ತಿಯಲ್ಲಿ ಅಪರೂಪದ ಕಪ್ಪು ಚಿರತೆ ಸೆರೆ

ದಸರಾ ಹಬ್ಬದ ಸಂಭ್ರಮದ ಹೊತ್ತಿನಲ್ಲೇ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳ ಉತ್ಸಾಹಕ್ಕೆ ತಣ್ಣೀರು ಎರಚಿರುವ ಕಾಲೇಜು ಆಡಳಿತ ಮಂಡಳಿಯ ಈ ಕ್ರಮ ಈಗ ಕರಾವಳಿ ಶೈಕ್ಷಣಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ