ಚಿಕ್ಕಬಳ್ಳಾಪುರ ಹೋಂಸ್ಟೇನಲ್ಲಿ ಯುವತಿ ನಿಗೂಢ ಸಾವು: ಪ್ರಜ್ಞಾಹೀನ ಸ್ಥಿತಿಯಲ್ಲಿ ಸಿಕ್ಕಿದ ಪ್ರಿಯಕರ ಆಸ್ಪತ್ರೆಗೆ ದಾಖಲು; ಪ್ರೇಮಿಗಳ ಆತ್ಮಹತ್ಯೆ ಯತ್ನವೋ ಅಥವಾ ಕೊಲೆಯೋ?

ಚಿಕ್ಕಬಳ್ಳಾಪುರ: ರಾಜಧಾನಿ ಬೆಂಗಳೂರಿನ ಹೊರವಲಯದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೋಂಸ್ಟೇ ಒಂದರಲ್ಲಿ ಯುವತಿಯೊಬ್ಬಳು ಶಂಕಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಇದೇ ವೇಳೆ ಆಕೆಯೊಂದಿಗೆ ತಂಗಿದ್ದ ಪ್ರಿಯಕರ ಅದೇ ಜಾಗದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸ್ಥಳದಲ್ಲಿ ಸಿಕ್ಕಿತು ಹಗ್ಗ, ಮಾತ್ರೆಗಳು!: ವಿಷ ಸೇವನೆಯ ಶಂಕೆ:

Advertisement

ಹೋಂಸ್ಟೇ ಆವರಣದೊಳಗೆ ಯುವತಿಯ ಮೃತದೇಹ ಪತ್ತೆಯಾಗಿದ್ದು, ಘಟನಾ ಸ್ಥಳವನ್ನು ಪರಿಶೀಲಿಸಿದ ಪೊಲೀಸರಿಗೆ ಒಂದು ಹಗ್ಗ ಹಾಗೂ ಕೆಲವು ಮಾತ್ರೆಗಳು ಪತ್ತೆಯಾಗಿವೆ. ಮಾತ್ರೆಗಳು ಸಿಕ್ಕಿರುವುದರಿಂದ ಇಬ್ಬರೂ ವಿಷ ಸೇವಿಸಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಆದರೆ ಯುವತಿಯ ಸಾವಿಗೆ ನಿಖರವಾದ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆಯ (Post-mortem) ವರದಿ ಬಂದ ನಂತರವಷ್ಟೇ ಅಧಿಕೃತವಾಗಿ ತಿಳಿದುಬರಬೇಕಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೊಂದು ಹೈವೇ ದರೋಡೆ!: ಮುಂಜಾನೆ ವೇಳೆ ಕೇರಳದ ಚಿನ್ನದ ವ್ಯಾಪಾರಿಯ ಕಾರು ಅಡ್ಡಗಟ್ಟಿ 180 ಗ್ರಾಂ ಚಿನ್ನದೊಂದಿಗೆ ಖದೀಮರು ಪರಾರಿ!

ಪ್ರಿಯಕರನ ಸ್ಥಿತಿ ಗಂಭೀರ; ತನಿಖೆಯಲ್ಲಿ ಪೊಲೀಸರಿಗೆ ಮೂಡಿದ ಹಲವು ಅನುಮಾನ:

ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಯುವಕನನ್ನು ಸಂಜೀತ್ ಅಲಿ ಎಂದು ಗುರುತಿಸಲಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಆತನಿಗೆ ತುರ್ತು ಚಿಕಿತ್ಸೆ ಮುಂದುವರಿದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಅಥವಾ ಇಬ್ಬರೂ ಒಟ್ಟಿಗೆ ಸಾಯಬೇಕೆಂದು ನಿರ್ಧರಿಸಿ ‘ಆತ್ಮಹತ್ಯೆ ಒಪ್ಪಂದ’ (Suicide Pact) ಮಾಡಿಕೊಂಡು ಈ ಕೃತ್ಯಕ್ಕೆ ಮುಂದಾಗಿದ್ದಾರೆಯೇ? ಎಂಬಿತ್ಯಾದಿ ಸಾಧ್ಯತೆಗಳ ಬಗ್ಗೆ ಪೊಲೀಸರು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕುಶಾಲ್ ಚೌಕ್ಸಿ ಹಾಗೂ ಇತರ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂಲಗಳ ಪ್ರಕಾರ, ಮೃತ ಯುವತಿ ಹಾಗೂ ಸಂಜೀತ್ ಅಲಿ ಕಳೆದ ಕೆಲವು ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿ ಮತ್ತು ಸಂಬಂಧಕ್ಕೆ ಇಬ್ಬರ ಕುಟುಂಬಸ್ಥರಿಂದ ತೀವ್ರ ವಿರೋಧವಿತ್ತು ಎನ್ನಲಾಗಿದೆ. ಈ ಹಿಂದೆ ಕೂಡ ಯುವತಿ ಇದೇ ಯುವಕನೊಂದಿಗೆ ಮನೆಯನ್ನು ಬಿಟ್ಟು ಹೋಗಿದ್ದಳು ಎಂದು ತಿಳಿದುಬಂದಿದೆ. ಪ್ರಸ್ತುತ ಈ ಜೋಡಿ ಕಳೆದ ಶನಿವಾರದಂದು ಮುದ್ದೇನಹಳ್ಳಿ ಬಳಿಯ ಈ ಹೋಂಸ್ಟೇಗೆ ಬಂದು ರೂಮ್ ಪಡೆದು ವಾಸ್ತವ್ಯ ಹೂಡಿತ್ತು. ಪೊಲೀಸರು ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಮುಂದಿನ ಕ್ರಮ ಕೈಗೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *