ಮಂಗಳೂರಿನಲ್ಲಿ ಮತ್ತೊಂದು ಹೈವೇ ದರೋಡೆ!: ಮುಂಜಾನೆ ವೇಳೆ ಕೇರಳದ ಚಿನ್ನದ ವ್ಯಾಪಾರಿಯ ಕಾರು ಅಡ್ಡಗಟ್ಟಿ 180 ಗ್ರಾಂ ಚಿನ್ನದೊಂದಿಗೆ ಖದೀಮರು ಪರಾರಿ!

udupi-bike-accident-clash-chain-snatching-case-counter-case

ಮಂಗಳೂರು: ಕರಾವಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆಕೋರರ ಅಟ್ಟಹಾಸ ಮುಂದುವರಿದಿದ್ದು, ಮಂಗಳೂರಿನ ಬೈಕಂಪಾಡಿ ಬಳಿ ಸೋಮವಾರ ಮುಂಜಾನೆ ಕೇರಳ ಮೂಲದ ಚಿನ್ನದ ವ್ಯಾಪಾರಿಯೊಬ್ಬರ ಕಾರನ್ನು ಅಡ್ಡಗಟ್ಟಿದ 7 ಮಂದಿ ಸಶಸ್ತ್ರ ದರೋಡೆಕೋರರ ಗ್ಯಾಂಗ್, ಕಾರಿನ ಸಮೇತ 180 ಗ್ರಾಂ ಚಿನ್ನಾಭರಣಗಳನ್ನು ಲೂಟಿ ಮಾಡಿ ಪರಾರಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ.

ಕೇರಳದ ಪಯ್ಯನ್ನೂರು ನಿವಾಸಿಯಾದ ವಿಕಾಸ್ ಎಂಬುವವರೇ ಈ ಭೀಕರ ದರೋಡೆಗೆ ತುತ್ತಾದ ವ್ಯಾಪಾರಿ. ವಿಕಾಸ್ ಅವರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜ್ಯುವೆಲ್ಲರಿ ಶಾಪ್ (ಚಿನ್ನದ ಅಂಗಡಿ) ಹೊಂದಿದ್ದಾರೆ. ಸೋಮವಾರ ಮುಂಜಾನೆ ಸುಮಾರು 2:15 ರ ವೇಳೆಗೆ ವಿಕಾಸ್ ಅವರು ತಮ್ಮ ಪತ್ನಿ ಮತ್ತು ಮಗನೊಂದಿಗೆ ಸಾಂಗ್ಲಿಯಿಂದ ಪಯ್ಯನ್ನೂರಿಗೆ ತಮ್ಮ ಸ್ವಿಫ್ಟ್ ಕಾರಿನಲ್ಲಿ ಹಿಂತಿರುಗುತ್ತಿದ್ದರು.

Advertisement

ಇವರ ಕಾರು ಮಂಗಳೂರಿನ ಬೈಕಂಪಾಡಿ ತಲುಪುತ್ತಿದ್ದಂತೆ, ಇವರ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಏಳು ಮಂದಿ ಅಪರಿಚಿತ ದರೋಡೆಕೋರರ ಗ್ಯಾಂಗ್ ಸಿನಿಮೀಯ ಶೈಲಿಯಲ್ಲಿ ಇವರ ಕಾರನ್ನು ತಡೆದಿದೆ.

ಇದನ್ನೂ ಓದಿ:ರಾಮಮಂದಿರ ಕಾಣಿಕೆ ಲೂಟಿ ಕೇಸ್: ಒಂದೇ ಕುಟುಂಬದ ಇಬ್ಬರ ಸುತ್ತ ಸುತ್ತುತ್ತಿದೆ ತನಿಖೆಯ ಜಾಲ!; ಭಾವ-ಮೈದುನ ಸೇರಿ ನಡೆಸಿದ ಜಂಟಿ ಕಳ್ಳತನದ ಮಾಸ್ಟರ್ ಪ್ಲಾನ್ ಬಯಲು!

ನಡುರಸ್ತೆಯಲ್ಲೇ ಕಾರನ್ನು ಅಡ್ಡಗಟ್ಟಿದ ಖದೀಮರು, ವ್ಯಾಪಾರಿ ವಿಕಾಸ್ ಮತ್ತು ಅವರ ಕುಟುಂಬಸ್ಥರನ್ನು ಬೆದರಿಸಿ ಹೆದ್ದಾರಿಯಲ್ಲೇ ಇಳಿಸಿದ್ದಾರೆ. ಬಳಿಕ ಅವರ ಬಳಿಯಿದ್ದ 180 ಗ್ರಾಂ ತೂಕದ ಚಿನ್ನದ ಆಭರಣಗಳು ಹಾಗೂ ಸ್ವತಃ ಅವರ ಸ್ವಿಫ್ಟ್ ಕಾರಿನ ಸಮೇತ ದರೋಡೆಕೋರರು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ. ಸದ್ಯ ಮುಂಜಾನೆಯ ಕತ್ತಲಲ್ಲಿ ನಡೆದ ಈ ಹೈವೇ ರಾಬರಿ ಕರಾವಳಿ ಜನತೆಯನ್ನು ಬೆಚ್ಚಿಬೀಳಿಸಿದೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹೆದ್ದಾರಿಯ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಆಧರಿಸಿ ದರೋಡೆಕೋರರ ಪತ್ತೆಗೆ ಪೊಲೀಸರು ತೀವ್ರ ಜಾಲ ಬೀಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *