ರಾಮಮಂದಿರ ಕಾಣಿಕೆ ಲೂಟಿ ಕೇಸ್: ಒಂದೇ ಕುಟುಂಬದ ಇಬ್ಬರ ಸುತ್ತ ಸುತ್ತುತ್ತಿದೆ ತನಿಖೆಯ ಜಾಲ!; ಭಾವ-ಮೈದುನ ಸೇರಿ ನಡೆಸಿದ ಜಂಟಿ ಕಳ್ಳತನದ ಮಾಸ್ಟರ್ ಪ್ಲಾನ್ ಬಯಲು!

ಅಯೋಧ್ಯೆ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕಳ್ಳತನ ಹಗರಣದ ತನಿಖೆ ತೀವ್ರಗೊಂಡಿದ್ದು, ಇದೀಗ ಒಂದೇ ಕುಟುಂಬದ ಇಬ್ಬರು ಪ್ರಮುಖ ವ್ಯಕ್ತಿಗಳು ಈ ಇಡೀ ಜಾಲದ ಕೇಂದ್ರಬಿಂದುವಾಗಿ ಹೊರಹೊಮ್ಮಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನಕ್ಕೊಳಗಾಗಿರುವ 8 ಮಂದಿ ಆರೋಪಿಗಳ ಪೈಕಿ ಅನುಕಲ್ಪ್ ಮಿಶ್ರಾ ಮತ್ತು ಆತನ ಮೈದುನ (ಭಾವ) ಲವಕುಶ್ ಮಿಶ್ರಾ ಪ್ರಮುಖರಾಗಿದ್ದಾರೆ.

ಭಕ್ತರು ದೇವರಿಗೆ ಸಮರ್ಪಿಸಿದ ಕಾಣಿಕೆ ಪೆಟ್ಟಿಗೆಯ ಹಣವನ್ನು ಇವರಿಬ್ಬರೇ ಸೇರಿ ವ್ಯವಸ್ಥಿತವಾಗಿ ಲೂಟಿ ಮಾಡುತ್ತಿದ್ದರು ಎಂಬ ಆಘಾತಕಾರಿ ಸತ್ಯ ತನಿಖೆಯಲ್ಲಿ ಬಯಲಾಗಿದೆ.

Advertisement

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಟ್ರಸ್ಟ್‌ಗೆ ಭಾರಿ ಆಘಾತ!; ದೇಣಿಗೆ ಹಗರಣದ ಬೆನ್ನಲ್ಲೇ ಚಂಪತ್ ರಾಯ್, ಅನಿಲ್ ಮಿಶ್ರಾ ದಿಢೀರ್ ರಾಜೀನಾಮೆ!

ಪೊಲೀಸ್ ಮೂಲಗಳ ಪ್ರಕಾರ, ಈ ಇಡೀ ರ್ಯಾಕೆಟ್‌ನ ಮಾಸ್ಟರ್ ಮೈಂಡ್ (Mastermind) ಬೇರೆ ಯಾರೂ ಅಲ್ಲ, ಅದು ಅನುಕಲ್ಪ್ ಮಿಶ್ರಾ. ಭಕ್ತರು ನೀಡುವ ನಗದು ಮತ್ತು ಇತರೆ ಅಮೂಲ್ಯ ವಸ್ತುಗಳನ್ನು ಎಣಿಕೆ ಮಾಡುವ ಜವಾಬ್ದಾರಿಯಿದ್ದ ತನ್ನದೇ ತಂಡದಲ್ಲಿ ತನ್ನ ಮೈದುನ ಲವಕುಶ್ ಮಿಶ್ರಾ ಸಾಥ್ ಕೊಡುವಂತೆ ಅನುಕಲ್ಪ್ ಅತ್ಯಂತ ಚಾಣಾಕ್ಷತನದಿಂದ ಆತನಿಗೆ ಕೆಲಸ ಕೊಡಿಸಿದ್ದನು. ರಾಜಕೀಯ ವಲಯದಲ್ಲೂ ಭಾರಿ ತಲ್ಲಣ ಮೂಡಿಸಿರುವ ಈ ಮಹಾ ಹಗರಣದ ಸಂಪೂರ್ಣ ಸ್ಕೆಚ್ ಈ ಭಾವ-ಮೈದುನರದೇ ಆಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.

ಅನುಕಲ್ಪ್ ಮಿಶ್ರಾ ಅವರ ಇತ್ತೀಚಿನ ಐಷಾರಾಮಿ ಜೀವನಶೈಲಿಯ ಬಗ್ಗೆ ತನಿಖೆ ನಡೆಸಲು ಪೊಲೀಸರು ಆತನ ಸ್ವಗ್ರಾಮವಾದ ಬಸಾವಾಕ್ಕೆ ಭೇಟಿ ನೀಡಿದಾಗ ಮತ್ತಷ್ಟು ಸ್ಫೋಟಕ ಮಾಹಿತಿಗಳು ಲಭ್ಯವಾಗಿವೆ. ಇಡೀ ಹಳ್ಳಿಯಲ್ಲಿರುವ ಇತರ ಮನೆಗಳಿಗಿಂತ ಅನುಕಲ್ಪ್‌ನ ಮನೆ ಸಂಪೂರ್ಣ ಭಿನ್ನವಾಗಿ ನಿಲ್ಲುತ್ತದೆ. ಮೊದಲ ನೋಟದಲ್ಲೇ ಇಡೀ ಬಸಾವಾ ಗ್ರಾಮದಲ್ಲೇ ಅತ್ಯಂತ ಐಷಾರಾಮಿ ಮತ್ತು ಶ್ರೀಮಂತ ಪ್ರಾಪರ್ಟಿಯಾಗಿ ಈ ಮನೆ ಕಣ್ಣಿಗೆ ಕಟ್ಟುವಂತಿದೆ. ದೇವರ ದುಡ್ಡನ್ನು ಕದ್ದೇ ಈತ ಇಷ್ಟೊಂದು ದೊಡ್ಡ ಸಾಮ್ರಾಜ್ಯ ಕಟ್ಟಿದ್ದಾನೆ ಎಂಬುದಕ್ಕೆ ಪೊಲೀಸರಿಗೆ ಪ್ರಬಲ ಸಾಕ್ಷ್ಯಗಳು ಸಿಕ್ಕಿವೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *