ಮುಂಬೈ : ದೇಶದ ವಾಣಿಜ್ಯ ರಾಜಧಾನಿ ಮುಂಬೈನ ಬೀದಿಬದಿ ವ್ಯಾಪಾರಿಗಳು ಹಾಗೂ ಪ್ರಸಿದ್ಧ ರೆಸ್ಟೋರೆಂಟ್ಗಳ ಆಹಾರ ನೈರ್ಮಲ್ಯದಲ್ಲಿ (Food Hygiene) ಕ್ರಾಂತಿಕಾರಿ ಬದಲಾವಣೆಯೊಂದು ಕಂಡುಬರುತ್ತಿದೆ. ಮಹಾರಾಷ್ಟ್ರದ ಆಹಾರ ಭದ್ರತಾ ಆಯುಕ್ತ (Food Safety Commissioner) ತುಕಾರಾಂ ಮುಂಧೆ (Tukaram Mundhe) ಅವರು ಜಾರಿಗೆ ತಂದಿರುವ ಕಟ್ಟುನಿಟ್ಟಿನ ನಿಯಮ ಹಾಗೂ ನಿರಂತರ ದಾಳಿಗಳ ಪರಿಣಾಮವಾಗಿ ಮುಂಬೈನ ‘ಸ್ಟ್ರೀಟ್ ಫುಡ್’ ಶೈಲಿಯೇ ಬದಲಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದರ ವೀಡಿಯೋ ಭಾರಿ ವೈರಲ್ ಆಗಿದೆ.
ಡೊಮಿನೋಸ್, ಪಿಜ್ಜಾ ಹಟ್ ಮೇಲೆಯೂ ದಾಳಿ – ಪರವಾನಗಿ ಅಮಾನತು!
51 ವರ್ಷದ ದಕ್ಷ ಐಎಎಸ್ ಅಧಿಕಾರಿ ತುಕಾರಾಂ ಮುಂಧೆ ಅವರು ಆಹಾರ ನೈರ್ಮಲ್ಯ ಉಲ್ಲಂಘನೆ ವಿರುದ್ಧ ತೀವ್ರ ಸಮರ ಸಾರಿದ್ದಾರೆ. ನಿಯಮ ಉಲ್ಲಂಘಿಸಿದ ೪ ಡೊಮಿನೋಸ್ (Domino’s) ಹಾಗೂ ೧ ಪಿಜ್ಜಾ ಹಟ್ (Pizza Hut) ಔಟ್ಲೆಟ್ಗಳ ಪರವಾನಗಿಯನ್ನು ಅಮಾನತುಗೊಳಿಸಿದ್ದಾರೆ.
View this post on Instagram
ಸರ್ಕಾರಿ ಕಚೇರಿಗಳ ಕ್ಯಾಂಟೀನ್ಗಳಿಂದ ಹಿಡಿದು ಪರವಾನಗಿ ಇಲ್ಲದೆ ನಡೆಯುತ್ತಿದ್ದ ನೂರಾರು ಬೀದಿಬದಿ ತಳ್ಳುಗಾಡಿಗಳ ಮೇಲೆ ದಾಳಿ ನಡೆಸಿ ಬೀಗ ಜಡಿಯಲಾಗಿದೆ.ಸಾಮಾಜಿಕ ಜಾಲತಾಣಗಳ ‘kshytrea’ ಎಂಬ ಕಂಟೆಂಟ್ ಕ್ರಿಯೇಟರ್ ಅಕೌಂಟ್ನಲ್ಲಿ ಮುಂಬೈ ನಗರದ ಪ್ರಸ್ತುತ ಆಹಾರ ನೈರ್ಮಲ್ಯದ ಬದಲಾವಣೆಯನ್ನು ‘ಬದ್ಲಾವ್’ (Badlav) ಶೀರ್ಷಿಕೆಯಡಿ ವೀಡಿಯೋ ಮೂಲಕ ತೋರಿಸಲಾಗಿದೆ. ೩.೫ ಕೋಟಿಗೂ ಹೆಚ್ಚು (35.5 Million Views) ವೀಕ್ಷಣೆ ಪಡೆದಿರುವ ಈ ವೀಡಿಯೋದಲ್ಲಿ ಕಂಡುಬಂದ ಪ್ರಮುಖ ಬದಲಾವಣೆಗಳು ಇಲ್ಲಿವೆ.
ಇದನ್ನೂ ಓದಿ: ಕಿವಿ ತುರಿಕೆಗೆ ಆನೆಯ ‘ದೇಸಿ ಟ್ರೀಟ್ಮೆಂಟ್’: ಸಣ್ಣ ಕಡ್ಡಿಯನ್ನೇ ಬಳಸಿಕೊಂಡು ಆರಾಮ ಕಂಡ ಆನೆಯ ವಿಡಿಯೋ ವೈರಲ್
ಈ ಹಿಂದೆ ವಿಷಕಾರಿ ರಾಸಾಯನಿಕ ಶಾಯಿ ಹೊಂದಿದ್ದ ದಿನಪತ್ರಿಕೆಗಳ (Newspapers) ಬದಲು ಈಗ ಬಟರ್ ಪೇಪರ್ಗಳನ್ನು ಬಳಸಲಾಗುತ್ತಿದೆ. ಮಂಚೂರಿಯನ್ ಹಾಗೂ ಚಟ್ನಿಗಳಿಗೆ ಅಪಾಯಕಾರಿ ಕೃತಕ ಬಣ್ಣಗಳನ್ನು (Artificial Dyes) ಸೇರಿಸುವುದು ನಿಂತಿದ್ದು, ನೈಸರ್ಗಿಕ ಬಣ್ಣದಲ್ಲೇ ಖಾದ್ಯಗಳನ್ನು ನೀಡಲಾಗುತ್ತಿದೆ.
ಬೀದಿಬದಿ ವ್ಯಾಪಾರಿಗಳು ಹಾಗೂ ಬಾಣಸಿಗರು ಕಡ್ಡಾಯವಾಗಿ ಕೈಗವಸು (Gloves) ಮತ್ತು ತಲೆಗೆ ಹೇರ್ನೆಟ್ (Hairnets) ಧರಿಸಿ ಆಹಾರ ತಯಾರಿಸುತ್ತಿದ್ದಾರೆ. ಹೋಟೆಲ್ಗಳು ಹಾಗೂ ತಳ್ಳುಗಾಡಿಗಳಲ್ಲಿ ಪಾತ್ರೆಗಳನ್ನು ಸ್ವಚ್ಛವಾಗಿ ತೊಳೆಯಲಾಗುತ್ತಿದ್ದು, ಟಿಶ್ಯೂ ಪೇಪರ್ನಿಂದ ಒರೆಸಿದರೂ ಧೂಳು ಕಾಣಿಸುತ್ತಿಲ್ಲ. ಸ್ಥಳೀಯ ಬೆಡ್, ಟೋಸ್ಟ್ ಹಾಗೂ ಸಾಸ್ ಬಾಟಲಿಗಳ ಮೇಲೆ ಸ್ಪಷ್ಟ ಎಂಆರ್ಪಿ, ತಯಾರಿಕಾ ಪದಾರ್ಥಗಳ ಪಟ್ಟಿ ಮತ್ತು ಎಕ್ಸ್ಪೈರಿ ಡೇಟ್ (Expiry Date) ನಮೂದಿಸಲಾಗುತ್ತಿದೆ.
ವೈರಲ್ ವೀಡಿಯೋಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ. “ಒಬ್ಬೇ ಒಬ್ಬ ದಕ್ಷ ಅಧಿಕಾರಿ ಮನಸ್ಸು ಮಾಡಿದರೆ ಇಷ್ಟೆಲ್ಲಾ ಬದಲಾವಣೆ ಸಾಧ್ಯ. ‘ಅಪರಿಚಿತ್’ ಸಿನಿಮಾ ಶೈಲಿಯಲ್ಲಿ ಮುಂಬೈ ಬದಲಾದಂತೆ ಅನಿಸುತ್ತಿದೆ” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. “ಇಡೀ ಸರ್ಕಾರದ ಶೇ. ೪೦ ರಷ್ಟು ಅಧಿಕಾರಿಗಳು ಈ ರೀತಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ದೇಶ ಎಷ್ಟೋ ಮುಂದುವರಿಯುತ್ತದೆ,” ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

