ಮಂಚಿ – ಕೊಳ್ನಾಡು ಪ್ರೌಢಶಾಲೆಯಲ್ಲಿ ‘ಯಕ್ಷಧ್ರುವ ಯಕ್ಷ ಶಿಕ್ಷಣ – 2026’ ಉದ್ಘಾಟನೆ: ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ನಾಟ್ಯ ತರಗತಿ

ಬಂಟ್ವಾಳ: ಗ್ರಾಮೀಣ ಭಾಗದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಕಲೆ ಮತ್ತು ಸಂಸ್ಕಾರವನ್ನು ಬೆಳೆಸುವ ನಿಟ್ಟಿನಲ್ಲಿ, ಮಂಚಿ – ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ಉಚಿತ ಯಕ್ಷಗಾನ ನಾಟ್ಯ ತರಗತಿಗಳ ‘ಯಕ್ಷಧ್ರುವ ಯಕ್ಷ ಶಿಕ್ಷಣ – 2026’ ಕಾರ್ಯಕ್ರಮಕ್ಕೆ ಶುಕ್ರವಾರ (ಜೂನ್ 19) ಚಾಲನೆ ನೀಡಲಾಯಿತು.

ಸರಕಾರಿ ಪ್ರೌಢ ಶಾಲೆ ಮಂಚಿ – ಕೊಳ್ನಾಡು ಮತ್ತು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ, ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಾಯೋಜಕತ್ವ ಹಾಗೂ ವಿಟ್ಲ ಘಟಕದ ಸಹಯೋಗದೊಂದಿಗೆ ಶಾಲಾ ಸಭಾಂಗಣದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಾಲಾ ಹಿರಿಯ ವಿದ್ಯಾರ್ಥಿ, ಯಕ್ಷಗಾನ ಕಲಾವಿದೆ ಹಾಗೂ ಶಿಕ್ಷಕಿಯಾಗಿರುವ ಶ್ರೀಮತಿ ಶಾಲಿನಿ ಶೆಟ್ಟಿ ಅವರು ಮಾತನಾಡಿ, “ಪಟ್ಲ ಫೌಂಡೇಶನ್ ವತಿಯಿಂದ ನಡೆಸಲಾಗುವ ಉಚಿತ ಯಕ್ಷ ಶಿಕ್ಷಣ ಯೋಜನೆಯು ಕೇವಲ ಕಲೆಯ ಕಲಿಕೆಯಷ್ಟೇ ಅಲ್ಲದೆ, ಮಕ್ಕಳ ಪ್ರತಿಭೆ, ಬೌದ್ಧಿಕ ವಿಕಾಸ ಹಾಗೂ ಸಂಸ್ಕಾರದ ಗುಣಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕರಾವಳಿಯ ವಿಶಿಷ್ಟ ಕಲೆಯಾದ ಯಕ್ಷಗಾನವನ್ನು ಕಲಿಯುವ ಅವಕಾಶ ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಿಗೆ ದೊರೆತಿರುವುದು ವಿದ್ಯಾರ್ಥಿಗಳ ಸೌಭಾಗ್ಯವಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದರು.

ಮಂಗಳೂರು ಪಟ್ಲ ಫೌಂಡೇಶನ್ ಸಂಸ್ಥೆಯ ಪ್ರಧಾನ ಸಂಚಾಲಕರಾದ ಪಣಂಬೂರು ವಾಸುದೇವ ಐತಾಳ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, “ವಿದ್ಯಾರ್ಥಿ ದೆಸೆಯಲ್ಲೇ ಕಲಾಸ್ವಾದನೆ ಮತ್ತು ಕಲೆಗಳನ್ನು ಕರಗತ ಮಾಡಿಕೊಳ್ಳುವ ಆಸಕ್ತಿ ಬೆಳೆಸಿಕೊಂಡರೆ, ಅದು ಬದುಕಿನ ದಾರಿಗೆ ಉತ್ತಮ ಮೌಲ್ಯವನ್ನು ತಂದುಕೊಡುತ್ತದೆ” ಎಂದರು.

ಬಂಟ್ವಾಳ ತಾಲೂಕು ಘಟಕದ ಸಂಚಾಲಕರಾದ ಸಾಯಿಸುಮಾ ನಾವಡ ಅವರು ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯ ಮಹತ್ವ ಮತ್ತು ಅದರ ಸಕಾರಾತ್ಮಕ ಪ್ರಭಾವದ ಬಗ್ಗೆ ಅರಿವು ಮೂಡಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವಿಟ್ಲ ಘಟಕದ ಅಧ್ಯಕ್ಷರಾದ ಪೂವಪ್ಪ ಶೆಟ್ಟಿ ಅವರು ಮಾತನಾಡಿ, ಯಕ್ಷ ಶಿಕ್ಷಣದ ಕನಸು ಇಂದು ಜಿಲ್ಲೆಯ ಗಡಿಗಳನ್ನು ಮೀರಿ ವಿಸ್ತರಿಸುತ್ತಿದ್ದು, ಯಕ್ಷಗಾನದ ಅಸ್ತಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಪರಿಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: ನೀಟ್ ಯುಜಿ ಮರು ಪರೀಕ್ಷಾ ದಿನಾಂಕ ಪ್ರಕಟ: ಎನ್‌ಟಿಎಯಿಂದ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್; ಈ ಬಾರಿ ಸಿಗಲಿದೆ ಹೆಚ್ಚುವರಿ 15 ನಿಮಿಷ ಕಾಲಾವಕಾಶ!

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾವಂತ ಯಕ್ಷಗಾನ ವಿದ್ಯಾರ್ಥಿನಿ ಪ್ರತೀಕ್ಷಾ ಇವರನ್ನು ಹಿರಿಯ ವಿದ್ಯಾರ್ಥಿ ಸಂಘ ಮತ್ತು ಪಟ್ಲ ಫೌಂಡೇಶನ್ ವತಿಯಿಂದ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ (SDMC) ಅಧ್ಯಕ್ಷರಾದ ಶಿವಶಂಕರ ರಾವ್ ಅವರು ಮಾತನಾಡಿ, ಮಂಚಿ ಶಾಲೆಯ ವಿದ್ಯಾರ್ಥಿಗಳು ನಿರಂತರವಾಗಿ ಕಲಾ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಯಕ್ಷ ಶಿಕ್ಷಣದ ಕನಸನ್ನು ಸಾಕಾರಗೊಳಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಯಕ್ಷಗಾನ ಗುರುಗಳಾದ ಕಟೀಲು ಮೇಳದ ಪ್ರಸಿದ್ಧ ಕಲಾವಿದ ಅಶ್ವತ್ಥ್ ಮಂಜನಾಡಿ ಅವರು ವಿದ್ಯಾರ್ಥಿಗಳಿಗೆ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಾರಿಕೆಯನ್ನು ಬೋಧಿಸಿದರು. ವೇದಿಕೆಯಲ್ಲಿ ವಿಟ್ಲ ಘಟಕದ ಗೌರವ ಸಲಹೆಗಾರರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಪ್ರಧಾನ ಸಂಚಾಲಕ ಸುಂದರ ಶೆಟ್ಟಿ ಮತ್ತು ಕಾರ್ಯದರ್ಶಿ ಅರವಿಂದ ರೈ ಉಪಸ್ಥಿತರಿದ್ದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಶೀಲ ವಿಟ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾ ಶಿಕ್ಷಕ ಜಗನ್ನಾಥ ಪಿ. ವಂದಿಸಿ, ಕಲಾವಿದ ತಾರಾನಾಥ್ ಕೈರಂಗಳ ಕಾರ್ಯಕ್ರಮ ನಿರೂಪಿಸಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು