ಹೈದರಾಬಾದ್: ಗಣೇಶ ಚತುರ್ಥಿಯ ಸಂಭ್ರಮದ ಹಿನ್ನೆಲೆಯಲ್ಲಿ ತೆಲಂಗಾಣದ ಹೈದರಾಬಾದ್‌ನ ಬೇಗಂ ಬಜಾರ್‌ನಲ್ಲಿ (Begum Bazar) ಕಣ್ಣುಕೋರೈಸುವಂತಹ ಅಪರೂಪದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಸಾರ್ವಜನಿಕರ ಹಾಗೂ ಭಕ್ತಾದಿಗಳ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ಇಲ್ಲಿನ ಪ್ರಸಿದ್ಧ ‘ಲಿಚಿ ಪರ್ಲ್ ಸೆಟ್ ಜ್ಯುವೆಲ್ಸ್’ ಮಳಿಗೆಯಲ್ಲಿ 24 ಕ್ಯಾರೆಟ್ ಚಿನ್ನದ ಲೇಪನ ಹೊಂದಿರುವ ಹಾಗೂ 3,83,800 ಅಮೆರಿಕನ್ ಡೈಮಂಡ್‌ಗಳಿಂದ ಅಲಂಕೃತಗೊಂಡ ಬೃಹತ್ ಗಣೇಶನ ಮೂರ್ತಿಯನ್ನು ಭಕ್ತಿಯಿಂದ ಸ್ಥಾಪಿಸಲಾಗಿದೆ. ಈ ವಿಶೇಷ ಗಣೇಶ ಮೂರ್ತಿಯನ್ನು ಸ್ಥಳೀಯವಾಗಿ ‘ಲಿಚಿ ಕಾ ರಾಜಾ’ (Lee-Chee Ka Raja) ಎಂದೂ ಕರೆಯಲಾಗುತ್ತಿದ್ದು, ಇದು ತನ್ನ ವಿನ್ಯಾಸದಿಂದಲೇ ಗಮನ ಸೆಳೆಯುತ್ತಿದೆ.
ಹಿತ್ತಾಳೆ ಸೇರಿದಂತೆ ಐದು ಪ್ರಮುಖ ಲೋಹಗಳನ್ನು (ಪಂಚಲೋಹ) ಬಳಸಿ ಮಾಡಲಾದ ಈ ಮೂರ್ತಿಯ ಹಿಂಭಾಗದ ಕಮಾನಿನಲ್ಲಿ ದಶಾವತಾರಗಳ ಕೆತ್ತನೆ ಇದ್ದು, ಮೇಲ್ಭಾಗದಲ್ಲಿ ಶ್ರೀ ತಿರುಪತಿ ಬಾಲಾಜಿ ಹಾಗೂ ಇರುಪಕ್ಕಗಳಲ್ಲಿ ಲಕ್ಷ್ಮಿ ಮತ್ತು ಸರಸ್ವತಿ ದೇವಿಯರ ಚಿತ್ರಣವಿದೆ. ಮೂರ್ತಿಯ ಆಕಾರ ಮತ್ತು ವೈಭವದ ವಿನ್ಯಾಸವನ್ನು ಮುಂಬೈನ ವಿಶ್ವಪ್ರಸಿದ್ಧ ‘ಲಾಲ್‌ಬಾಗ್‌ಚಾ ರಾಜಾ’ ಮೂರ್ತಿಯ ಶೈಲಿಯಿಂದ ಸ್ಫೂರ್ತಿ ಪಡೆದು ರೂಪಿಸಲಾಗಿದೆ.
ಇದನ್ನೂ ಓದಿ: ಇಂದಿನ ರಾಶಿಫಲ: ಈ ರಾಶಿಯವರಿಗೆ ಧನಲಾಭ , ವಾಹನ ಯೋಗ, ಯಾರಿಗೆ ಕಾದಿದೆ ಶುಭ ಸುದ್ದಿ?
ಲಿಚಿ ಪರ್ಲ್ ಸೆಟ್ ಜ್ಯುವೆಲ್ಸ್ ಸಂಸ್ಥೆಯ ಸಂಘಟಕ ಆಧಾರ್ ಅಗರ್‌ವಾಲ್ (Adhar Agarwal) ಅವರ ಪ್ರಕಾರ, ಇದು ತಮ್ಮ ಮಳಿಗೆಯ 3ನೇ ವರ್ಷದ ಗಣೇಶೋತ್ಸವದ ಆಚರಣೆಯಾಗಿದೆ. 3.83 ಲಕ್ಷಕ್ಕೂ ಅಧಿಕ ಅಮೆರಿಕನ್ ಡೈಮಂಡ್‌ಗಳನ್ನು ಪ್ರತಿಯೊಂದನ್ನೂ ಕೈಯಿಂದಲೇ ಮೂರ್ತಿಗೆ ಜೋಡಿಸಲಾಗಿದೆ.
ವಿನ್ಯಾಸಕರು, ಕಾಸ್ಟಿಂಗ್ ಸಿಬ್ಬಂದಿ ಹಾಗೂ ಕಲ್ಲು ಜೋಡಿಸುವ 8 ಮಂದಿ ಪರಿಣಿತ ಕುಶಲಕರ್ಮಿಗಳ ತಂಡವು ಸತತ 8 ತಿಂಗಳ ಕಾಲ ಹಗಲು-ರಾತ್ರಿ ಶ್ರಮಿಸಿ ಈ ಭವ್ಯ ಮೂರ್ತಿಯನ್ನು ಸಿದ್ಧಪಡಿಸಿದೆ. ಆಭರಣ ತಯಾರಿಕೆಗೆ ಬಳಸುವ ಉನ್ನತ ಮಟ್ಟದ ಕಚ್ಚಾವಸ್ತುಗಳನ್ನು ಬಳಸಿಯೇ ಈ ವಿಗ್ರಹಕ್ಕೆ ಸಂಪೂರ್ಣ ಆಭರಣದ ಮೆರುಗು ನೀಡಲಾಗಿದೆ.

