ಗರ್ಭಿಣಿಯರೇ ಎಚ್ಚರ!: ದಿನವಿಡೀ ಕುಳಿತಲ್ಲೇ ಕುಳಿತರೆ ದುಪ್ಪಟ್ಟಾಗಲಿದೆ ಹೆರಿಗೆಯ ಅಪಾಯ; ಸಂಶೋಧನೆಯಲ್ಲಿ ಸ್ಪೋಟಕ ಮಾಹಿತಿ

ಗರ್ಭಾವಸ್ಥೆಯಲ್ಲಿ ಉತ್ತಮ ಆಹಾರ ಸೇವನೆ, ಸೂಕ್ತ ವಿಶ್ರಾಂತಿ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗಿ ದಿನವಿಡೀ ಒಂದೇ ಕಡೆ ಕುಳಿತುಕೊಳ್ಳುವುದನ್ನು ಕಡಿಮೆ ಮಾಡುವುದು ಸಹ ಅಷ್ಟೇ ಅತ್ಯಗತ್ಯ ಎಂದು ಜಾಗತಿಕ ವೈದ್ಯಕೀಯ ನಿಯತಕಾಲಿಕೆ ‘ಜಾಮಾ’ (JAMA) ಪ್ರಕಟಿಸಿರುವ ನೂತನ ಅಧ್ಯಯನ ತಿಳಿಸಿದೆ. ಗರ್ಭಿಣಿಯರು ದೀರ್ಘಕಾಲ ಕುಳಿತುಕೊಳ್ಳುವ ಅಭ್ಯಾಸವನ್ನು ಕಡಿಮೆ ಮಾಡಿ, ದೈನಂದಿನ ಲಘು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಗರ್ಭಾವಸ್ಥೆಯ ಪ್ರಮುಖ ಹಂತಗಳಲ್ಲಿ ಎದುರಾಗುವ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎಂದು ಸಂಶೋಧಕರು ಪತ್ತೆಹಚ್ಚಿದ್ದಾರೆ.

ವಿಜ್ಞಾನಿಗಳು ಒಟ್ಟು 470 ಗರ್ಭಿಣಿಯರನ್ನು ಅವರ ಗರ್ಭಾವಸ್ಥೆಯ ಆರಂಭಿಕ ದಿನಗಳಿಂದ ಹೆರಿಗೆಯಾಗುವವರೆಗೂ ನಿರಂತರವಾಗಿ ನಿಗಾದಲ್ಲಿ ಇರಿಸಿದ್ದರು. ಅವರ ದೈನಂದಿನ ನಡಿಗೆ ಮತ್ತು ಕುಳಿತುಕೊಳ್ಳುವ ಸಮಯವನ್ನು ನಿಖರವಾಗಿ ಅಳೆಯಲು ತೊಡೆಯ ಭಾಗಕ್ಕೆ ಧರಿಸಬಹುದಾದ ‘ಅಕ್ಸೆಲೆರೊಮೀಟರ್’ (Accelerometers) ಎಂಬ ವಿಶೇಷ ಸಾಧನಗಳನ್ನು ಬಳಸಲಾಗಿತ್ತು. ಈ ಸಂಶೋಧನೆಯಲ್ಲಿ ಭಾಗವಹಿಸಿದ್ದ ಗರ್ಭಿಣಿಯರು ಸರಾಸರಿ ದಿನಕ್ಕೆ 10.1 ಗಂಟೆಗಳ ಕಾಲ ಕುಳಿತುಕೊಳ್ಳುತ್ತಿದ್ದರು, 4.6 ಗಂಟೆಗಳ ಕಾಲ ಲಘು ದೈಹಿಕ ಚಟುವಟಿಕೆ ನಡೆಸುತ್ತಿದ್ದರು ಮತ್ತು ಪ್ರತಿದಿನ ಸುಮಾರು 6,783 ಹೆಜ್ಜೆಗಳನ್ನು ಇಡುತ್ತಿದ್ದರು ಎಂಬುದು ಪತ್ತೆಯಾಗಿದೆ.

ಹೆಚ್ಚಿದ ಕುಳಿತರೆ ಕಾಡಲಿವೆ ಗಂಭೀರ ಕಾಯಿಲೆಗಳು!:

ಅಧ್ಯಯನದ ಅವಧಿಯಲ್ಲಿ ಶೇಕಡಾ 37 ರಷ್ಟು (174 ಮಹಿಳೆಯರು) ಗರ್ಭಿಣಿಯರು ಗರ್ಭಾವಸ್ಥೆಯ ಮಧುಮೇಹ , ಅಕಾಲಿಕ ಹೆರಿಗೆ ಮತ್ತು ಮಗುವಿನ ಕಡಿಮೆ ತೂಕದಂತಹ ತೀವ್ರ ತೊಂದರೆಗಳನ್ನು ಎದುರಿಸಿದ್ದಾರೆ. ಇದಲ್ಲದೆ, ಶೇಕಡಾ 18.3 ರಷ್ಟು (86 ಮಹಿಳೆಯರು) ಗರ್ಭಿಣಿಯರಲ್ಲಿ ಅಧಿಕ ರಕ್ತದೊತ್ತಡ ಮತ್ತು ಗರ್ಭಾವಸ್ಥೆಯ ಪ್ರಿಕ್ಲಾಂಪ್ಸಿಯಾದಂತಹ ಅಪಾಯಕಾರಿ ಲಕ್ಷಣಗಳು ಕಂಡುಬಂದಿವೆ.

ಕಡಿಮೆ ಕುಳಿತರೆ ಶೇ. 50 ರಷ್ಟು ಅಪಾಯ ಮುಕ್ತಿ!:

ಸಂಶೋಧನೆಯ ಪ್ರಕಾರ, ದಿನಕ್ಕೆ ಕೇವಲ 7 ಗಂಟೆಗಳ ಕಾಲ ಕುಳಿತುಕೊಳ್ಳುವ ಅಭ್ಯಾಸ ಹೊಂದಿರುವ ಗರ್ಭಿಣಿಯರಲ್ಲಿ ಹೆರಿಗೆಯ ಸಮಸ್ಯೆಯ ಅಪಾಯವು ಕೇವಲ ಶೇಕಡಾ 19 ರಷ್ಟಿತ್ತು. ಆದರೆ, ದಿನಕ್ಕೆ 10 ಗಂಟೆಗಳಿಗಿಂತ ಹೆಚ್ಚು ಕಾಲ ಕುಳಿತುಕೊಳ್ಳುವವರಲ್ಲಿ ಈ ಅಪಾಯದ ಪ್ರಮಾಣವು ಶೇಕಡಾ 41 ಕ್ಕಿಂತ ಹೆಚ್ಚಾಗಿತ್ತು. ಅಂದರೆ, ದೀರ್ಘಕಾಲ ಕುಳಿತುಕೊಳ್ಳುವ ಗರ್ಭಿಣಿಯರಲ್ಲಿ ಆರೋಗ್ಯ ಏರುಪೇರಾಗುವ ಸಾಧ್ಯತೆ 2 ಪಟ್ಟು ಅಧಿಕವಾಗಿರುತ್ತದೆ.

ಇದನ್ನೂ ಓದಿ: ರಾತ್ರಿ ಪದೇ ಪದೇ ಕೆಟ್ಟ ಕನಸು ಬೀಳುತ್ತಾ?: ನೆಮ್ಮದಿಯ ನಿದ್ರೆಗೆ ಇಲ್ಲಿದೆ ಸರಳ ‘ಸ್ಲೀಪ್ ಸೈನ್ಸ್’ ಸೂತ್ರ

ಪ್ರತಿ ಹೆಜ್ಜೆಯೂ ಅಮೂಲ್ಯ – ವಿಜ್ಞಾನಿಗಳ ಸಲಹೆ:

ದೀರ್ಘಕಾಲ ಕುಳಿತುಕೊಳ್ಳುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ನಿಧಾನಗೊಳ್ಳುತ್ತದೆ, ಸ್ನಾಯುಗಳ ಚಟುವಟಿಕೆ ಕುಂಠಿತಗೊಳ್ಳುತ್ತದೆ ಹಾಗೂ ರಕ್ತದಲ್ಲಿನ ಸಕ್ಕರೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ದೇಹವು ಕಳೆದುಕೊಳ್ಳುತ್ತದೆ. ಗರ್ಭಾವಸ್ಥೆಯಲ್ಲಿ ಆಯಾಸ ಅಥವಾ ವಾಕರಿಕೆಯಿಂದಾಗಿ ಜಿಮ್ ಅಥವಾ ಕಠಿಣ ವ್ಯಾಯಾಮ ಮಾಡಲು ಸಾಧ್ಯವಾಗದವರು ಕೇವಲ ಮನೆಗೆಲಸ ಮಾಡುವುದು, ಕಚೇರಿಯಲ್ಲಿ ನಿಂತು ಕೆಲಸ ಮಾಡುವುದು, ಅಡುಗೆ ಮನೆ ಕೆಲಸ ಹಾಗೂ ಸಣ್ಣ ನಡಿಗೆಯಂತಹ (Walking) ಲಘು ಚಟುವಟಿಕೆಗಳನ್ನು ಮಾಡುವುದರಿಂದಲೂ ಶೇಕಡಾ 40 ರಷ್ಟು ಅಪಾಯವನ್ನು ತಡೆಯಬಹುದು. ಅತಿ ಹೆಚ್ಚು ಹೆಜ್ಜೆಗಳನ್ನು ಇಟ್ಟ ಗರ್ಭಿಣಿಯರಲ್ಲಿ ಹೆರಿಗೆಯ ಅಪಾಯವು ಕೇವಲ ಶೇಕಡಾ 32.2 ರಷ್ಟಿತ್ತು ಎಂದು ಸಂಶೋಧಕರು ತಿಳಿಸಿದ್ದು, ನಿಯಮಿತ ನಡಿಗೆಯೇ ಗರ್ಭಿಣಿಯರಿಗೆ ಅತ್ಯಂತ ಸುರಕ್ಷಿತ ಎಂದು ಸಾಬೀತುಪಡಿಸಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು