ಅಯೋಧ್ಯೆ: ವಿಶ್ವಪ್ರಸಿದ್ಧ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ (Ayodhya Ram Mandir) ಭಕ್ತರು ಭಕ್ತಿಯಿಂದ ಸಮರ್ಪಿಸಿದ ಕಾಣಿಕೆ ಹಣ ಹಾಗೂ ಚಿನ್ನಾಭರಣಗಳ ಎಣಿಕೆ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ಮತ್ತು ಕಳ್ಳತನ ನಡೆದಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಆಘಾತಕಾರಿ ಬೆಳವಣಿಗೆಯ ಬೆನ್ನಲ್ಲೇ, ದೇವಸ್ಥಾನದ ದೇಣಿಗೆ ಎಣಿಕೆ ಕಾರ್ಯದಲ್ಲಿದ್ದ ಸುಮಾರು 40 ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೆಲಸದಿಂದ ವಜಾಗೊಳಿಸಲಾಗಿದೆ.
ಬ್ಯಾಂಕ್ ಟ್ರಸ್ಟ್ ಈಗ ವಜಾಗೊಂಡ ನೌಕರರ ಜಾಗಕ್ಕೆ ಸಂಪೂರ್ಣ ಹೊಸ ಸಿಬ್ಬಂದಿಯನ್ನು ನೇಮಕ ಮಾಡಿದ್ದು, ಇನ್ಮುಂದೆ ಹಣ ಮತ್ತು ಆಭರಣಗಳ ಎಣಿಕೆಗೆ ಅತ್ಯಂತ ಕಟ್ಟುನಿಟ್ಟಿನ ಸಿಸಿಟಿವಿ ಹಾಗೂ ಅಧಿಕಾರಿಗಳ ನೇರ ಮೇಲ್ವಿಚಾರಣೆಯನ್ನು ಇರಿಸಲಾಗಿದೆ.

ಮಂದಿರದ ಕಾಣಿಕೆ ಲೂಟಿಯ ಕುರಿತು ತನಿಖೆ ನಡೆಸಲು ರಚಿಸಲಾಗಿದ್ದ ಮೂವರು ಸದಸ್ಯರ ವಿಶೇಷ ತನಿಖಾ ತಂಡವು (SIT) ಕಳೆದ ಆರು ದಿನಗಳಿಂದ ಅಯೋಧ್ಯೆಯಲ್ಲೇ ಬೀಡುಬಿಟ್ಟು ತೀವ್ರ ತನಿಖೆ ನಡೆಸಿದೆ. ಈ ಹೈ-ಪ್ರೊಫೈಲ್ ತನಿಖಾ ತಂಡವು ಇಂದು (ಜೂನ್ 22) ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಸಲಿದೆ.
ಎಸ್ಐಟಿ ಅಧಿಕಾರಿಗಳು ದೇವಸ್ಥಾನದ ಹಳೆಯ ದೇಣಿಗೆ ದಾಖಲೆಗಳು, ಹಣ ಎಣಿಕೆ ಮಾಡುವ ಕೋಣೆಯ ಸಿಸಿಟಿವಿ (CCTV) ದೃಶ್ಯಾವಳಿಗಳು, ನಗದು ನಿರ್ವಹಣಾ ವಿಧಾನಗಳು ಮತ್ತು ಭಕ್ತರು ನೀಡಿದ ಪ್ರಮುಖ ಆಭರಣಗಳ ವಿವರಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದಾರೆ. ಈ ಹಗರಣಕ್ಕೆ ಸಂಬಂಧಿಸಿದಂತೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಮುಖರು, ಮಂದಿರದ ಅರ್ಚಕರು, ಬ್ಯಾಂಕ್ ಅಧಿಕಾರಿಗಳು ಮತ್ತು ನಗದು ನಿರ್ವಹಣೆ ಮಾಡುತ್ತಿದ್ದ ಸಿಬ್ಬಂದಿ ಸೇರಿದಂತೆ 100 ಕ್ಕೂ ಹೆಚ್ಚು ಜನರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಕೋಟಿ ಕೋಟಿ ಭಕ್ತರ ಆರಾಧ್ಯ ದೈವದ ಮಂದಿರದಲ್ಲೇ ಇಂತಹ ಅಪಚಾರ ಮತ್ತು ಆರ್ಥಿಕ ವಂಚನೆ ನಡೆದಿರುವುದು ಜಗತ್ತಿನಾದ್ಯಂತ ಇರುವ ರಾಮಭಕ್ತರಲ್ಲಿ ತೀವ್ರ ಆಕ್ರೋಶ ಮೂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಿಎಂ ಯೋಗಿ ಆದಿತ್ಯನಾಥ್ ಮುಂದಾಗಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

