ಬಿಹಾರದಲ್ಲಿ ‘ನಕಲಿ ಎನ್‌ಕೌಂಟರ್’ ಶಂಕೆ!: 28 ವರ್ಷದ ಸೋಷಿಯಲ್ ಆಕ್ಟಿವಿಸ್ಟ್ ಹತ್ಯೆಗೆ ಭಾರಿ ಆಕ್ರೋಶ

ಪಾಟ್ನಾ: ಬಿಹಾರದ ಭೋಜಪುರ ಜಿಲ್ಲೆಯಲ್ಲಿ 28 ವರ್ಷದ ಯುವಕ ಭರತ್ ಭೂಷಣ್ ತಿವಾರಿ ಎಂಬಾತನ ಎನ್‌ಕೌಂಟರ್ ಹತ್ಯೆಯು ರಾಜ್ಯ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಪೊಲೀಸರ ಈ ಕ್ರಮದ ವಿರುದ್ಧ ಸಾರ್ವಜನಿಕ ವಲಯ ಹಾಗೂ ವಿರೋಧ ಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಆಡಳಿತಾರೂಢ ಬಿಜೆಪಿ ಒಳಗೂ ಈ ಕುರಿತು ಅಸಮಾಧಾನದ ಧ್ವನಿಗಳು ಕೇಳಿಬರಲಾರಂಭಿಸಿವೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಬಿಹಾರ ಸರ್ಕಾರವು ಘಟನೆಯ ಕುರಿತು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.

ಬಿಹಾರ ಪೊಲೀಸರ ಪ್ರಕಾರ, ಜೂನ್ 17 ರಂದು ಭೋಜಪುರದ ಬಿಲೌತಿ ಗ್ರಾಮದಲ್ಲಿ ಭರತ್ ಭೂಷಣ್ ತಿವಾರಿ ಪಿಸ್ತೂಲ್ ಹಿಡಿದು ಸಾರ್ವಜನಿಕವಾಗಿ ಗುಂಡು ಹಾರಿಸುತ್ತಿದ್ದಾನೆ ಎಂಬ ಮಾಹಿತಿ ಸಿಕ್ಕಿತ್ತು. ತಕ್ಷಣವೇ ಸ್ಥಳೀಯ ಪೊಲೀಸರು ಮತ್ತು ಎಸ್‌ಟಿಎಫ್ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿದ್ದರು. “ತಿವಾರಿಗೆ ಶರಣಾಗುವಂತೆ ನಾವು ಪದೇ ಪದೇ ಸೂಚಿಸಿದೆವು. ಆದರೆ ಆತ ಪೊಲೀಸರ ಮೇಲೆಯೇ ಗುಂಡಿನ ದಾಳಿ ಮುಂದುವರಿಸಿದ. ಹೀಗಾಗಿ ಆತ್ಮರಕ್ಷಣೆಗಾಗಿ ಮತ್ತು ಸ್ಥಳೀಯ ನಾಗರಿಕರ ಸುರಕ್ಷತೆಗಾಗಿ ನಾವು ಪ್ರತಿದಾಳಿ ನಡೆಸಬೇಕಾಯಿತು” ಎಂದು ಪೊಲೀಸ್ ಇಲಾಖೆ ಎನ್‌ಕೌಂಟರ್ ಅನ್ನು ಸಮರ್ಥಿಸಿಕೊಂಡಿದೆ.

Advertisement

ಆದರೆ, ಈ ಎನ್‌ಕೌಂಟರ್ ನಕಲಿ ಇರಬಹುದು ಎಂಬ ಅನುಮಾನಗಳು ವ್ಯಕ್ತವಾಗಿದ್ದು, ರಾಜ್ಯಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿವೆ. ಈ ಹಿನ್ನೆಲೆಯಲ್ಲಿ ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಘಟನೆಯ ಎಲ್ಲಾ ಆಯಾಮಗಳನ್ನು ಅತ್ಯಂತ ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ತನಿಖೆ ನಡೆಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ; ಲಕ್ನೋದ ಕೋಚಿಂಗ್ ಸೆಂಟರ್‌ನಲ್ಲಿ ಭೀಕರ ಅಗ್ನಿ ಅವಘಡ; 15 ವಿದ್ಯಾರ್ಥಿಗಳು ಸಜೀವ ದಹನ, ಪ್ರಾಣ ಉಳಿಸಿಕೊಳ್ಳಲು ಮೊದಲ ಮಹಡಿಯಿಂದ ಜಿಗಿದ ಯುವಕರು!

ಕೊಲೆಯಾದ ಭರತ್ ಭೂಷಣ್ ತಿವಾರಿ (28) ಭೋಜಪುರ ಜಿಲ್ಲೆಯ ಶಾಹಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಲೌತಿ ಗ್ರಾಮದ ನಿವಾಸಿಯಾಗಿದ್ದ. ಸ್ಥಳೀಯವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುತ್ತಿದ್ದ ಈತನನ್ನು ಗ್ರಾಮಸ್ಥರು ಸೋಷಿಯಲ್ ಆಕ್ಟಿವಿಸ್ಟ್ ಎಂದು ಗುರುತಿಸುತ್ತಿದ್ದರು. ಬಡ ಕುಟುಂಬಗಳು, ಪ್ರವಾಹ ಸಂತ್ರಸ್ತರು ಹಾಗೂ ಸ್ಥಳಾಂತರಗೊಂಡ ಸಮುದಾಯಗಳ ಹಕ್ಕುಗಳಿಗಾಗಿ ಈತ ನಿರಂತರವಾಗಿ ಧ್ವನಿ ಎತ್ತುತ್ತಿದ್ದ ಎಂದು ಸ್ಥಳೀಯರು ಕಣ್ಣೀರಿಟ್ಟಿದ್ದಾರೆ. ಸದ್ಯ ಬಿಹಾರದಲ್ಲಿ ಈ ಎನ್‌ಕೌಂಟರ್ ಪ್ರಕರಣ ದೊಡ್ಡ ರಾಜಕೀಯ ವಿವಾದವಾಗಿ ಮಾರ್ಪಟ್ಟಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *