ಕಾಲು ಜಾರಿ ಬಿದ್ರು ಅಂದಿದ್ದ ಸಿಯಾ ಕಟ್ಟಿದ ಕತೆ ಸುಳ್ಳು!: ಪುಣೆ ಕೋಟೆಯ ಕೊಲೆ ಕೇಸ್‌ನಲ್ಲಿ ಮಗನ ಸಾವಿನ ರಹಸ್ಯ ಬಿಚ್ಚಿಟ್ಟ ಉದ್ಯಮಿ ತಂದೆ

ಪುಣೆ: ಮಹಾರಾಷ್ಟ್ರದ ಪುಣೆಯ ಪ್ರಸಿದ್ಧ ಲೋಹಗಢ ಕೋಟೆಯಲ್ಲಿ (Lohagad Fort) ಉದ್ಯಮಿ ಪುತ್ರ ಕೇತನ್ ಅಗರ್ವಾಲ್ 400 ಅಡಿ ಆಳದ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ ಪ್ರಕರಣ ಈಗ ಇಡೀ ದೇಶವನ್ನೇ ಬೆಚ್ಚಿಬೀಳಿಸುವ ರೋಚಕ ಕೊಲೆ ಕೇಸ್ ಆಗಿ ಮಾರ್ಪಟ್ಟಿದೆ. ಫೋಟೋಶೂಟ್ ವೇಳೆ ಕಾಲು ಜಾರಿ ಬಿದ್ದಿದ್ದಾರೆ ಎಂದು ಮೊದಲು ನಂಬಲಾಗಿದ್ದ ಈ ಸಾವಿನ ಹಿಂದೆ, ಆತ ಮದುವೆಯಾಗಬೇಕಿದ್ದ ವಧು ಸಿಯಾ ಗೋಯಲ್ ಮತ್ತು ಆಕೆಯ ರಹಸ್ಯ ಪ್ರಿಯಕರ ಚೇತನ್ ಚೌಧರಿಯ ಭೀಕರ ಕೈವಾಡ ಇರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಪಿಂಪ್ರಿ-ಚಿಂಚಾಂವಡ್‌ನ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿ ವಿಶಾಲ್ ಅಗರ್ವಾಲ್ ಅವರ 26 ವರ್ಷದ ಪುತ್ರ ಕೇತನ್ ಅಗರ್ವಾಲ್ ಹಾಗೂ ಮತ್ತೊಬ್ಬ ಉದ್ಯಮಿಯ ಮಗಳಾದ ಸಿಯಾ ಗೋಯಲ್ ವಿವಾಹ ಇದೇ ವರ್ಷ ನವೆಂಬರ್‌ನಲ್ಲಿ ಜೈಪುರದ ಪ್ರಸಿದ್ಧ ಅರಮನೆಯಲ್ಲಿ ನಡೆಯಬೇಕಿತ್ತು. ಇದಕ್ಕಾಗಿ ಕುಟುಂಬಸ್ಥರು ಬರೋಬ್ಬರಿ 17 ಕೋಟಿ ರೂಪಾಯಿ ನೀಡಿ ಪ್ಯಾಲೇಸ್ ಬುಕ್ ಮಾಡಿದ್ದರು. ಆದರೆ, ಮನೆಯವರು ನಿಶ್ಚಯಿಸಿದ್ದ ಈ ಮದುವೆ ಸಿಯಾಗೆ ಇಷ್ಟವಿರಲಿಲ್ಲ. ತಾನು ಪ್ರೀತಿಸುತ್ತಿದ್ದ ಚೇತನ್ ಚೌಧರಿ ಜೊತೆ ಜೀವಿಸಲು ಕೇತನ್ ಅಡ್ಡಿಯಾಗಿದ್ದಾನೆ ಎಂದು ಭಾವಿಸಿದ ಸಿಯಾ, ಪ್ರಿಯಕರನೊಂದಿಗೆ ಸೇರಿ ಕೊಲೆಗೆ ಸ್ಕೆಚ್ ಹಾಕಿದ್ದಳು.

Advertisement

ಜೂನ್ 18ರಂದು ಸಿಯಾ ಗೋಯಲ್ ತನ್ನ ಹುಟ್ಟುಹಬ್ಬದ ಆಚರಣೆಯ ನೆಪದಲ್ಲಿ ಕೇತನ್‌ನನ್ನು ಲೋಹಗಢ ಕೋಟೆಗೆ ಟ್ರೆಕ್ಕಿಂಗ್‌ಗೆ ಕರೆತಂದಿದ್ದಳು. ಕೋಟೆಯ ಅತ್ಯಂತ ನಿರ್ಜನ ಹಾಗೂ ಅಪಾಯಕಾರಿ ತುದಿಯಲ್ಲಿ ಕೇತನ್ ಫೋಟೋಗೆ ಪೋಸ್ ನೀಡುತ್ತಿದ್ದಾಗ, ಮೊದಲೇ ಅಲ್ಲಿಗೆ ಬಂದು ಹೊಂಚು ಹಾಕಿ ಕುಳಿತಿದ್ದ ಪ್ರಿಯಕರ ಚೇತನ್ ಹಾಗೂ ಸಿಯಾ ಸೇರಿ ಆತನನ್ನು 400 ಅಡಿ ಆಳದ ಪ್ರಪಾತಕ್ಕೆ ತಳ್ಳಿದ್ದಾರೆ. ತದನಂತರ ಸಿಯಾ ಪೊಲೀಸರ ಮುಂದೆ, “ಫೋಟೋ ಕ್ಲಿಕ್ಕಿಸುವಾಗ ಕೇತನ್ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದರು” ಎಂದು ಕಣ್ಣೀರಿಡುತ್ತಾ ಸುಳ್ಳು ಕತೆ ಕಟ್ಟಿದ್ದಳು.

ಇದನ್ನೂ ಓದಿ: ಬಿಹಾರದಲ್ಲಿ ‘ನಕಲಿ ಎನ್‌ಕೌಂಟರ್’ ಶಂಕೆ!: 28 ವರ್ಷದ ಸೋಷಿಯಲ್ ಆಕ್ಟಿವಿಸ್ಟ್ ಹತ್ಯೆಗೆ ಭಾರಿ ಆಕ್ರೋಶ

ಕೇತನ್ ತಂದೆ ವಿಶಾಲ್ ಅಗರ್ವಾಲ್ ನೀಡಿದ ದೂರಿನನ್ವಯ ತನಿಖೆ ನಡೆಸಿದ ಪುಣೆ ಗ್ರಾಮಾಂತರ ಪೊಲೀಸರು ಸಿಯಾಳ ಮೊಬೈಲ್ ಕರೆಗಳು ಹಾಗೂ ಸೋಷಿಯಲ್ ಮೀಡಿಯಾ ಚಾಟ್‌ಗಳನ್ನು ಪರಿಶೀಲಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಇದಕ್ಕೂ ಮುನ್ನ ಈ ಜೋಡಿ ಬಾಲಿ ಪ್ರವಾಸಕ್ಕೆ ತೆರಳಬೇಕಿತ್ತು. ಆದರೆ ಕೇತನ್‌ನನ್ನು ಕೊಲ್ಲುವ ಉದ್ದೇಶದಿಂದಲೇ ಸಿಯಾ ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಕೇತನ್ ಪಾಸ್‌ಪೋರ್ಟ್ ಅನ್ನು ಹರಿದು ಹಾಕಿ ಪ್ರವಾಸ ರದ್ದಾಗುವಂತೆ ಮಾಡಿದ್ದಳು. ತದನಂತರ ಜೂನ್ 14 ರಂದೂ ಸಹ ಇದೇ ಕೋಟೆಯಲ್ಲಿ ಹಾವಿನ ಭಯ ಹುಟ್ಟಿಸಿ ಕೇತನ್‌ನನ್ನು ತಳ್ಳಲು ಯತ್ನಿಸಿದ್ದಳು, ಆದರೆ ಆಗ ಆತ ಗಿಡಗಳನ್ನು ಹಿಡಿದು ಬದುಕುಳಿದಿದ್ದ. ಸದ್ಯ ಪೊಲೀಸರು ಸಿಯಾ ಗೋಯಲ್ ಹಾಗೂ ಆಕೆಯ ಪ್ರಿಯಕರ ಚೇತನ್ ಚೌಧರಿಯನ್ನು ಬಂಧಿಸಿದ್ದು, ಭಾರತೀಯ ನ್ಯಾಯ ಸಂಹಿತೆಯಡಿ (BNS) ಕೊಲೆ ಪ್ರಕರಣ ದಾಖಲಿಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *