ಗೇಮರ್‌ಗಳಿಗೆ ಮೈಕ್ರೋಸಾಫ್ಟ್ ಬಿಗ್ ಶಾಕ್!; ಆಗಸ್ಟ್ 1 ರಿಂದ ಎಕ್ಸ್‌ಬಾಕ್ಸ್ ಕನ್ಸೋಲ್‌ಗಳ ಬೆಲೆ 14,100 ರೂ. ರಷ್ಟು ಭಾರಿ ಏರಿಕೆ

ಆಪಲ್ ಸಂಸ್ಥೆಯು ತನ್ನ ಆಯ್ದ ಐಪ್ಯಾಡ್ ಮತ್ತು ಮ್ಯಾಕ್‌ಬುಕ್ ಮಾಡೆಲ್‌ಗಳ ಬೆಲೆಯನ್ನು ಹೆಚ್ಚಿಸಿದ ಬೆನ್ನಲ್ಲೇ, ಈಗ ಜಾಗತಿಕ ಟೆಕ್ ದೈತ್ಯ ಮೈಕ್ರೋಸಾಫ್ಟ್ (Microsoft) ತನ್ನ ಜನಪ್ರಿಯ ಎಕ್ಸ್‌ಬಾಕ್ಸ್ (Xbox) ಗೇಮಿಂಗ್ ಕನ್ಸೋಲ್‌ಗಳ ಬೆಲೆಯಲ್ಲಿ ಭಾರಿ ಏರಿಕೆ ಮಾಡುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ. ಈ ಬಾರಿ ಕಂಪನಿಯು ಯಾವುದೇ ಹೊಸ ಹಾರ್ಡ್‌ವೇರ್ ಅಪ್‌ಗ್ರೇಡ್ ಅಥವಾ ಫೀಚರ್‌ಗಳ ಕಾರಣ ನೀಡಿಲ್ಲ. ಬದಲಿಗೆ, ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ತೀವ್ರ ಪೈಪೋಟಿಯೇ ಈ ಬೆಲೆ ಏರಿಕೆಗೆ ಮುಖ್ಯ ಕಾರಣ ಎಂದು ಕಂಪನಿ ತಿಳಿಸಿದೆ.

ಆಗಸ್ಟ್ 1 ರಿಂದ ಜಾಗತಿಕವಾಗಿ ಈ ಹೊಸ ದರಗಳು ಜಾರಿಗೆ ಬರಲಿದ್ದು, ಕೆಲವು ಕನ್ಸೋಲ್ ಮಾಡೆಲ್‌ಗಳ ಬೆಲೆ ಬರೊಬ್ಬರಿ 150 ಡಾಲರ್ (ಸುಮಾರು ₹14,100) ರವರೆಗೆ ದುಬಾರಿಯಾಗಲಿವೆ.

Advertisement

ಹೊಸ ದರಗಳ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ:

ಮೈಕ್ರೋಸಾಫ್ಟ್ ಪ್ರಕಟಿಸಿರುವ ಪರಿಷ್ಕೃತ ದರಗಳ ವಿವರಗಳು ಈ ಕೆಳಗಿನಂತಿವೆ:

Xbox Series S (512GB): ಈ ಮಾಡೆಲ್‌ನ ಬೆಲೆ 399.99 ಡಾಲರ್‌ನಿಂದ ಈಗ 499.99 ಡಾಲರ್‌ಗೆ (ಸುಮಾರು ₹47,000) ಏರಿಕೆಯಾಗಿದೆ.

Xbox Series S (1TB): ಇದರ ಬೆಲೆ 449.99 ಡಾಲರ್‌ನಿಂದ ನೇರವಾಗಿ 599.99 ಡಾಲರ್‌ಗೆ ಜಿಗಿದಿದೆ.

Xbox Series X ಲೈನ್‌ಅಪ್: ಈ ಹೈ-ಎಂಡ್ ಕನ್ಸೋಲ್‌ಗಳ ಬೆಲೆಯಲ್ಲೂ 150 ಡಾಲರ್‌ನಷ್ಟು ಭಾರಿ ಏರಿಕೆ ಮಾಡಲಾಗಿದ್ದು, ಇನ್ಮುಂದೆ ಗ್ರಾಹಕರು ಹೆಚ್ಚಿನ ಹಣ ತೆರಬೇಕಾಗುತ್ತದೆ.

2TB ವೇರಿಯಂಟ್ ಸ್ಥಗಿತ: ಬೆಲೆ ಏರಿಕೆಯ ಮಹತ್ವದ ನಿರ್ಧಾರದ ಜೊತೆಗೆ, ಮೈಕ್ರೋಸಾಫ್ಟ್ ತನ್ನ ಎಕ್ಸ್‌ಬಾಕ್ಸ್ ಸರಣಿಯ 2TB ಸ್ಟೋರೇಜ್ ಸಾಮರ್ಥ್ಯದ ಮಾಡೆಲ್ ಅನ್ನು ಮಾರುಕಟ್ಟೆಯಿಂದ ಸಂಪೂರ್ಣವಾಗಿ ಸ್ಥಗಿತಗೊಳಿಸಲು (Discontinue) ನಿರ್ಧರಿಸಿದೆ.

ಇದನ್ನೂ ಓದಿ:  ಪಿಕ್ಸೆಲ್ ಪ್ರೇಮಿಗಳಿಗೆ ಸುವರ್ಣಾವಕಾಶ!; ಅಮೆಜಾನ್‌ನಲ್ಲಿ ಗೂಗಲ್ ಪಿಕ್ಸೆಲ್ 10 ಮೇಲೆ ಭರ್ಜರಿ 16,229 ರೂ. ರಿಯಾಯಿತಿ

ಬೆಲೆ ಏರಿಕೆಯ ಹಿಂದೆ ‘AI’ ಲಿಂಕ್?; ಕನ್ಸೋಲ್ ಮ್ಯಾನುಫ್ಯಾಕ್ಚರಿಂಗ್ ದುಬಾರಿ!

ಮೈಕ್ರೋಸಾಫ್ಟ್ ನೀಡಿರುವ ಅಧಿಕೃತ ಸ್ಪಷ್ಟನೆಯ ಪ್ರಕಾರ, ಪ್ರಸ್ತುತ ಮಾರುಕಟ್ಟೆಯಲ್ಲಿ ಕನ್ಸೋಲ್‌ಗಳಿಗೆ ಬಳಸಲಾಗುವ ಸ್ಟೋರೇಜ್ ಮತ್ತು ರಾಮ್ ಬಿಡಿಭಾಗಗಳ ಬೆಲೆ 2.5 ಪಟ್ಟು (2.5x) ಹೆಚ್ಚು ದುಬಾರಿಯಾಗಿದೆ. 2027ರ ವೇಳೆಗೆ ಇವುಗಳ ಬೆಲೆ ಇನ್ನೂ ದುಪ್ಪಟ್ಟಾಗುವ ಸಾಧ್ಯತೆ ಇದೆ.

ಜಗತ್ತಿನಾದ್ಯಂತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತರಬೇತಿ ಮತ್ತು ಬೃಹತ್ ಡೇಟಾ ಸೆಂಟರ್‌ಗಳನ್ನು ನಿರ್ಮಿಸಲು ಎಐ ಕಂಪನಿಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಸುಧಾರಿತ ಮೆಮೊರಿ ಚಿಪ್‌ಗಳನ್ನು ಭಾರಿ ಪ್ರಮಾಣದಲ್ಲಿ ಮುಗಿಬಿದ್ದು ಖರೀದಿಸುತ್ತಿವೆ. ಇದರಿಂದಾಗಿ ಗ್ರಾಹಕ ಎಲೆಕ್ಟ್ರಾನಿಕ್ಸ್ ಉತ್ಪಾದಕರಿಗೆ ಚಿಪ್‌ಗಳ ತೀವ್ರ ಕೊರತೆ ಎದುರಾಗಿದ್ದು, ಉತ್ಪಾದನಾ ವೆಚ್ಚ ಗಗನಕ್ಕೇರಿದೆ.

ಗೇಮರ್‌ಗಳ ಲೆಕ್ಕಾಚಾರ ಉಲ್ಟಾ; ನವೆಂಬರ್‌ನಲ್ಲಿ ಬರಲಿದೆ ಜಿಟಿಎ 6!

ಮೈಕ್ರೋಸಾಫ್ಟ್ ಈ ನಿರ್ಧಾರವನ್ನು ಪ್ರಕಟಿಸಿರುವ ಸಮಯವು ಗೇಮಿಂಗ್ ಲೋಕದಲ್ಲಿ ಭಾರಿ ಸಂಚಲನ ಮೂಡಿಸಿದೆ. ಏಕೆಂದರೆ, ಇಡೀ ವಿಶ್ವವೇ ಕಾತರದಿಂದ ಕಾಯುತ್ತಿರುವ ಬಹುನಿರೀಕ್ಷಿತ ಗೇಮ್ ‘ಜಿಟಿಎ 6’ (GTA 6) ಇದೇ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಜಿಟಿಎ 6 ಲಾಂಚ್ ವೇಳೆ ಜಾಗತಿಕವಾಗಿ ಗೇಮಿಂಗ್ ಕನ್ಸೋಲ್‌ಗಳ ಮಾರಾಟ ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಅದಕ್ಕೂ ಮುನ್ನವೇ ಎಕ್ಸ್‌ಬಾಕ್ಸ್ ಬೆಲೆ ದುಬಾರಿಯಾಗಿರುವುದು ಗೇಮರ್‌ಗಳ ಜೇಬಿಗೆ ಕತ್ತರಿ ಹಾಕಿದಂತಾಗಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *